ಶ್ರೀಕಾಕುಳಂ: ಬಾಲಕಿಗೆ ರಾತ್ರಿ ತಾಳಿ ಕಟ್ಟಿ, ಇಬ್ಬರು ದೇವಸ್ಥಾನದಲ್ಲಿ ಕಾಲ ಕಳೆದು ಬೆಳಗ್ಗೆ ಯುವಕ ಪರಾರಿಯಾಗಿರುವ ಘಟನೆ ಆಂಧ್ರಪ್ರದೇಶದ ಶ್ರೀಕಾಕುಳಂನಲ್ಲಿ ನಡೆದಿದೆ.
ಹೌದು, ಪ್ರೀತಿಸಿದವಳನ್ನು ಮದುವೆ ಮಾಡಿಕೊಂಡು, ಆತನನ್ನು ನಂಬಿ ಬಂದವಳನ್ನು ನಡುನೀರಲ್ಲಿ ಕೈಬಿಟ್ಟು ಯುವಕ ಪರಾರಿಯಾಗಿದ್ದಾನೆ. ಯುವಕನಿಂದ ಮೋಸ ಹೋದ ಬಾಲಕಿ ನನಗೆ ನ್ಯಾಯ ಕೊಡಿಸಿ ಎಂದು ಅಂಗಲಾಚುತ್ತಿರುವ ಘಟನೆ ಇಲ್ಲಿನ ಪೊಲಾಕಿ ತಾಲೂಕು ವ್ಯಾಪ್ತಿಯಲ್ಲಿ ನಡೆದಿದೆ.
ನಾನು ಪಿಯು ವ್ಯಾಸಂಗ ಮಾಡುತ್ತಿದ್ದು, ಕಳೆದ ನಾಲ್ಕು ತಿಂಗಳಿನಿಂದಲೂ ವೆಂಕೆಟೇಶ್ ಎಂಬಾತ ಮದುವೆಯಾಗುವಂತೆ ಕಾಡುತ್ತಿದ್ದ. ಆತನ ಮಾಯದ ಮಾತುಗಳನ್ನು ನಂಬಿದೆ. ಗುರುವಾರ ರಾತ್ರಿ ದೇವಸ್ಥಾನದಲ್ಲಿ ವೆಂಕೆಟೇಶ್ ನನಗೆ ತಾಳಿ ಕಟ್ಟಿದ. ಬಳಿಕ ನಾವಿಬ್ಬರು ದೇವಸ್ಥಾನದಲ್ಲೇ ಕಾಲ ಕಳೆದೆವು. ಆದ್ರೆ ಬೆಳಗ್ಗೆ ಆತ ಪರಾರಿಯಾಗಿದ್ದಾನೆ. ಈ ವಿಷಯ ನಮ್ಮ ಪೋಷಕರಿಗೆ ತಿಳಿಸಿದ್ದೇನೆ ಎಂದು ಬಾಲಕಿ ಹೇಳಿದ್ದಾಳೆ.
ಇನ್ನು ಬಾಲಕಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ನನಗೆ ನ್ಯಾಯ ಕೊಡಿಸಿ ಎಂದು ಬಾಲಕಿ ಪೊಲೀಸರಿಗೆ ಮನವಿ ಸಲ್ಲಿಸಿದ್ದಾಳೆ. ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಲಕಿಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡುತ್ತೇವೆ ಎಂದು ಪೊಲೀಸ್ ಅಧಿಕಾರಿ ಭರವಸೆ ನೀಡಿದ್ದಾರೆ.