ಬೆಂಗಳೂರು: 72 ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ 72 ಕಿಲೋ ಮೀಟರ್ ಓಡುವ ಮೂಲಕ ಹರಿಯಾಣ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಲಿಪ್ಸಾ ಸಯಾಲ್ ವಿಶ್ವ ದಾಖಲೆ ನಿರ್ಮಿಸಲು ಯತ್ನಿಸಿದ್ದಾರೆ. ರಾಷ್ಟ್ರೀಯ ಧ್ವಜವನ್ನು ಹಿಡಿದು 72 ಕಿಲೋ ಮೀಟರ್ ಕ್ರಮಿಸಿದ್ದಾರೆ.
ಸ್ಪರ್ಧೆಯಲ್ಲಿ ಒಟ್ಟು 43 ಮಂದಿ ಭಾಗವಹಿಸಿದ್ದು, ಅದರಲ್ಲಿ ಇಬ್ಬರು ಸ್ತ್ರೀಯರು ಸ್ಪರ್ಧಿಸಿರೋದು ಹೆಮ್ಮೆಯ ಸಂಗತಿ. ಅವರಲ್ಲಿ ಒಬ್ಬರು ಲಿಪ್ಸಾ ಸಯಾಲ್. ಇವರ ತಂದೆ ಕೇಂದ್ರ ಅಂತರ್ಜಲ ಮಂಡಳಿಯ ನಿವೃತ್ತ ಗೆಜೆಟ್ ಅಧಿಕಾರಿ ರಮೇಶ್ ಚಂದರ್ ಸಿಯಾಲ್, ತಾಯಿ ಅಂಜನಾ ಸಿಯಾಲ್. ಅಂಬಾಲಾ ಕ್ಯಾಂಟ್ನ ಜಿಎಂಎನ್ ಕಾಲೇಜಿನಲ್ಲಿ ಬಿ.ಕಾಂ.ಪದವಿ ಪಡೆದಿರುವ ಇವರು, 2002 ರಿಂದ 2008 ರವರೆಗೆ ಹರಿಯಾಣ ಮಹಿಳಾ ಕ್ರಿಕೆಟ್ ತಂಡದ ನಾಯಕಿಯಾಗಿದ್ದರು. ಬಳಿಕ ರಿಲಯನ್ಸ್ನಲ್ಲಿ ಸೆಕ್ಯೂರಿಟಿ ಎಕ್ಸಿಕ್ಯೂಟಿವ್ ಆಗಿ 10 ವರ್ಷ ಸೇವೆ ಸಲ್ಲಿಸಿದ್ದಾರೆ. ಪುಣೆಯ ಕ್ಯಾಪ್ಜೆಮಿನಿಯಲ್ಲಿ ಪ್ರಾದೇಶಿಕ ಭದ್ರತಾ ಮುಖ್ಯಸ್ಥರಾಗಿ ಸೇರಿದರು. ಬೆಂಗಳೂರಿನ ಅಮೆಜಾನ್ನ ಸೆಕ್ಯೂರಿಟಿ& ಲಾಸ್ ಪ್ರಿವೆನ್ಷನ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮೊದಲಿಗೆ ಇವರು 100 ಕಿಲೋ ಮೀಟರ್ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ವಿಶ್ವದಾಖಲೆ ಮಾಡಿದ್ದರು. ಈಗ 72 ಕಿಲೋ ಮೀಟರ್ ಓಡುವ ಸ್ಪರ್ಧೆಯಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಮಾತನಾಡಿರುವ ಅವರು, ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು, ಯಾವುದೇ ಕೆಲಸದಲ್ಲಿಯೂ ಸಾಧಿಸುವವರಿಗೆ ಛಲ ಇರಬೇಕು. ಸಾಧಿಸಲಾಗದ್ದು ಏನೂ ಇಲ್ಲ, ಸತತ ಪ್ರಯತ್ನದಿಂದ ಮಾತ್ರ ಯಶಸ್ಸು ಸಾಧ್ಯ. ನನ್ನ ತಂದೆಯೇ ನನಗೆ ಸ್ಫೂರ್ತಿ ಎಂದಿದ್ದಾರೆ. ಅಲ್ಲದೆ, ನನಗೆ ಪ್ರೋತ್ಸಾಹಿಸುತ್ತಿರುವ ಸ್ನೇಹ ಬಳಗಕ್ಕೂ ನಾನು ಚಿರಋಣಿ. ನನ್ನ ಮುಂದಿನ ಗುರಿ ಮೌಂಟ್ ಎವರೆಸ್ಟ್ ಏರುವುದಾಗಿದೆ ಎಂದು ತಿಳಿಸಿದರು.