ಸಿಕರ್ (ರಾಜಸ್ತಾನ) : ರಾಜಸ್ಥಾನದ ಸಿಕರ್ ಜಿಲ್ಲೆಯಲ್ಲಿ ನಡೆದ ಪಂಚಾಯತ್ ಚುನಾವಣೆಯಲ್ಲಿ 97 ವರ್ಷದ ಮಹಿಳೆಯೊಬ್ಬರು ಸರ್ಪಂಚ್(ಗ್ರಾಮ ಪಂಚಾಯ್ತಿ ಅಧ್ಯಕ್ಷ) ಆಗಿ ಆಯ್ಕೆಯಾಗಿದ್ದಾರೆ.
ನೀಮ್ ಕಾ ಥಾನಾ ಉಪವಿಭಾಗದ ಅಡಿಯಲ್ಲಿ ಬರುವ ಪುರಾಣವಾಸ್ ಗ್ರಾಮ ಪಂಚಾಯಿತಿಯ ಸರ್ಪಂಚ್ ಆಗಿ ವಿದ್ಯಾ ದೇವಿ ಜಯಗಳಿಸಿದ್ದಾರೆ. ರಾಜಸ್ಥಾನದಲ್ಲಿ ನಡೆದ ಪಂಚಾಯತ್ ಚುನಾವಣೆಯ ಮೊದಲ ಹಂತದ ಮತದಾನದಲ್ಲಿ ವಿದ್ಯಾದೇವಿ ತಮ್ಮ ಪ್ರತಿಸ್ಪರ್ಧಿ ಆರತಿ ಮೀನಾ ಅವರನ್ನು 207 ಮತಗಳಿಂದ ಸೋಲಿಸಿದ್ದಾರೆ. ಒಟ್ಟು 4,200 ಮತಗಳ ಪೈಕಿ ಪಂಚಾಯತ್‌ನಲ್ಲಿ 2,856 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಇದರಲ್ಲಿ ವಿದ್ಯಾ ದೇವಿ 843 ಮತಗಳನ್ನು ಗಳಿಸಿದ್ದು ಇವರ ವಿರುದ್ಧ ಆರತಿ ಮೀನಾ ಕೇವಲ 636 ಮತಗಳನ್ನು ಗಳಿಸಿದ್ದಾರೆ ಎಂದು ನೀಮ್ ಕಾ ಥಾನಾದ ಉಪ ವಿಭಾಗೀಯ ಅಧಿಕಾರಿ ಸಾಧುರಾಮ್ ಜಾಟ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿ ಚುನಾವಣೆಗೆ ಒಟ್ಟು 11 ಅಭ್ಯರ್ಥಿಗಳು ಕಣದಲ್ಲಿದ್ದರು. 1990 ರ ಮೊದಲು 25 ವರ್ಷಗಳ ಕಾಲ ವಿದ್ಯಾ ದೇವಿಯವರ ಪತಿ ಮೇಜರ್ ಶಿವರಾಮ್ ಸಿಂಗ್ ಅವರು ಪಂಚಾಯಿತಿಯಿಂದ ಸರ್ಪಂಚ್ ಆಗಿದ್ದರು.
ಪಂಚಾಯತ್ ಚುನಾವಣೆಯ ಮೊದಲ ಹಂತದಲ್ಲಿ 87 ಪಂಚಾಯತ್ ಸಮಿತಿಯ 2,726 ಗ್ರಾಮ ಪಂಚಾಯಿತಿಗಳ 26,800 ವಾರ್ಡ್‌ಗಳಿಗೆ ಮತದಾನ ನಡೆಯಿತು. 48,49,232 ಪುರುಷರು ಮತ್ತು 44,71,405 ಮಹಿಳಾ ಮತದಾರರು ಸೇರಿದಂತೆ ಒಟ್ಟು 93,20,684 ಮತದಾರರು ಇದ್ದರು.
ಚುನಾವಣೆಯಲ್ಲಿ ಸರ್ಪಂಚ್ ಹುದ್ದೆಗೆ ಸುಮಾರು 17,242 ಅಭ್ಯರ್ಥಿಗಳು ಮತ್ತು ಪಂಚ ಹುದ್ದೆಗೆ 42,000 ಅಭ್ಯರ್ಥಿಗಳು ಕಣದಲ್ಲಿದ್ದರು.