ನವದೆಹಲಿ: ಸುಮಾರು 9 ಕೋಟಿ ಬಳಕೆದಾರರು ಆರೋಗ್ಯ ಸೇತು ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಕೊರೊನಾ ವಿರುದ್ಧದ ಹೋರಾಟಕ್ಕೆ ಸಹಕಾರಿಯಾಗಲು ಸರ್ಕಾರಿ ಮತ್ತು ಖಾಸಗಿ ವಲಯದ ನೌಕರರರಿಗೆ ಇದರ ಬಳಕೆ ಕಡ್ಡಾಯವಾಗಿದೆ ಎಂದು ಸರ್ಕಾರ ತಿಳಿಸಿದೆ.
ಕೊವಿಡ್ -19 ಕುರಿತ ಕೇಂದ್ರ ಸಚಿವರ ತಂಡ ತನ್ನ 14 ನೇ ಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಇದರಲ್ಲಿ ಆರೋಗ್ಯ ಸೇತು ಆ್ಯಪ್ನ ಕಾರ್ಯಕ್ಷಮತೆ, ಪರಿಣಾಮ ಮತ್ತು ಪ್ರಯೋಜನಗಳಿಗೆ ಸಂಬಂಧಿಸಿದ ವಿವಿಧ ಅಂಶಗಳನ್ನು ಚರ್ಚಿಸಲಾಗಿದೆ.
ಕೊರೊನಾದ ಅಪಾಯವನ್ನು ಎಚ್ಚರಿಸುವಲ್ಲಿ ಈ ಮೊಬೈಲ್ ಅಪ್ಲಿಕೇಶನ್ ಬಳಕೆದಾರರಿಗೆ ಸಹಾಯ ಮಾಡುತ್ತದೆ. ಕೊರೊನಾ ಮತ್ತು ಅದರ ರೋಗಲಕ್ಷಣಗಳನ್ನು ತಪ್ಪಿಸುವ ಮಾರ್ಗಗಳು ಸೇರಿದಂತೆ ಪ್ರಮುಖ ಮಾಹಿತಿಯನ್ನು ಇದು ಜನರಿಗೆ ಒದಗಿಸುತ್ತದೆ.
ಕೊರೊನಾದ ರೋಗಲಕ್ಷಣಗಳಿಂದ ಬಳಲುತ್ತಿರುವವರನ್ನು ಪತ್ತೆಹಚ್ಚಲು ಮಾಡಿದ ಈ ಅಪ್ಲಿಕೇಶನ್‌ನಲ್ಲಿ, ಜನರು ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಮಂತ್ರಿಗಳ ತಂಡ ಸರ್ಕಾರಕ್ಕೆ ತಿಳಿಸಿದೆ. ಹೆಚ್ಚಿನ ಜನರನ್ನು ತಲುಪಲು ಯಾಂತ್ರಿಕವಾದ ಹಲವು ವ್ಯವಸ್ಥೆಗಳನ್ನು ಈ ಅಪ್ಲಿಕೇಶನ್‌ನಲ್ಲಿ ರೂಪಿಸಲಾಗಿದೆ. ಹಾಗಾಗಿ ಇದು ಜನರಿಗೆ ತಮ್ಮ ಸ್ಥಳೀಯ ಭಾಷೆಗಳಲ್ಲಿ ಇಂಟರ್ಯಾಕ್ಟಿವ್ ವಾಯ್ಸ್ ರೆಸ್ಪಾನ್ಸ್ ಸಿಸ್ಟಮ್ (ಐವಿಆರ್ಎಸ್) ಮೂಲಕ ಮೊಬೈಲ್ ಫೋನ್ ಅಥವಾ ಲ್ಯಾಂಡ್ಲೈನ್ ಮೂಲಕ ದೊರೆಯುತ್ತದೆ ಎಂದು ತಿಳಿಸಿದ್ದಾರೆ.
ಕಂಟೈನ್ಮೆಂಟ್ ಝೋನ್ಗಳಲ್ಲಿರುವ ಜನರು ಕಡ್ಡಾಯವಾಗಿ ಈ ಆರೋಗ್ಯ ಸೇತು ಅಪ್ಲಿಕೇಶನ್ ಬಳಸಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.