ಚೆನ್ನೈ: ಲೆಬನಾನ್ ರಾಜಧಾನಿ ಬೈರುತ್ನಲ್ಲಿ 2,750 ಟನ್ ಅಮೋನಿಯಂ ನೈಟ್ರೇಟ್ ಸ್ಫೋಟಗೊಂಡು 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 3 ಸಾವಿರಕ್ಕೂ ಅಧಿಕ ಜನರು ಗಾಯಗೊಂಡಿರುವ ಘಟನೆ ನಡೆದಿದೆ. ಇದರ ಬೆನ್ನಲ್ಲೇ ಚೆನ್ನೈನಲ್ಲೂ 740 ಟನ್ ಅಮೋನಿಯಂ ನೈಟ್ರೇಟ್ ಸಂಗ್ರಹಿಸಿಟ್ಟಿದ್ದು ಬೆಳಕಿಗೆ ಬಂದಿದೆ.
ಚೆನ್ನೈನ ಹೊರವಲಯದಲ್ಲಿರುವ ಗೊದಾಮಿನಲ್ಲಿ ಇಷ್ಟೊಂದು ಪ್ರಮಾಣದ ಅಮೋನಿಯಂ ಸಂಗ್ರಹ ಮಾಡಲಾಗಿದ್ದು, ಎಲ್ಲ ರೀತಿಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
2015 ರಲ್ಲಿ ಕರೂರ್ ಮೂಲದ ರಾಸಾಯನಿಕ ಸಂಸ್ಥೆ ಆಮದು ಮಾಡಿಕೊಂಡಿದ್ದ ದೊಡ್ಡ ಪ್ರಮಾಣದ ರಾಸಾಯನಿಕವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದೊಂದು ವಸತಿ ರಹಿತ ಪ್ರದೇಶವಾಗಿದ್ದು, ಇ-ಹರಾಜು ಮೂಲಕ ಮಾರಾಟ ಮಾಡುವ ಪ್ರಕ್ರಿಯೆ ಶುರುವಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಲೆಬನಾನ್ನ ಬೈರುತ್ ಬಂದರಿನಲ್ಲಿ ಭಯಾನಕ ಸ್ಫೋಟ; 73 ಮಂದಿ ಸಾವು, 3,700 ಜನರಿಗೆ ಗಾಯ!
ಲೆಬನಾನ್ ರಾಜಧಾನಿ ಬಂದರು ಪ್ರದೇಶ ಬೈರುತ್ನಲ್ಲಿ ಮಂಗಳವಾರ ಸಂಭವಿಸಿದ ಸ್ಫೋಟದಲ್ಲಿ 100ಕ್ಕೂ ಅಧಿಕ ಜನರು ಸಾವನ್ನಪ್ಪಿ, 4 ಸಾವಿರ ಮಂದಿ ಗಾಯಗೊಂಡಿದ್ದರು.
ಅಮೋನಿಯಂ ನೈಟ್ರೇಟ್ ಬಗ್ಗೆ ಒಂದಿಷ್ಟು ಮಾಹಿತಿ..
ಅಮೋನಿಯಂ ನೈಟ್ರೇಟ್ ಕೃಷಿ ಚಟುವಟಿಕೆಗಳಲ್ಲಿ ಬಳಸುವ ರಾಸಾಯನಿಕ ಗೊಬ್ಬರಗಳಿಗೆ ಬೇಕಾದ ಪ್ರಮುಖ ಕಚ್ಚಾ ವಸ್ತು. ಶುದ್ಧ ರೂಪದಲ್ಲಿ ಅಮೋನಿಯಂ ನೈಟ್ರೇಟ್ ಬಿಳಿ ಹರಳು ರೂಪದಲ್ಲಿದ್ದು, ನೀರಿನಲ್ಲಿ ಕರಗಬಲ್ಲ ರಾಸಾಯನಿಕವಾಗಿದೆ. ಗಣಿಗಳಲ್ಲಿ ಸ್ಪೋಟಕವನ್ನಾಗಿಯೂ ಈ ವಸ್ತು ಬಳಕೆಯಾಗುತ್ತದೆ.