ಮಯೂರ್ಭಂಜ್(ಒಡಿಶಾ): 72 ವರ್ಷ ವಯಸ್ಸಿನ ಬುಡಕಟ್ಟು ವಿಧವೆಯೊಬ್ಬರು ಕಳೆದ 3 ವರ್ಷಗಳಿಂದ ಶೌಚಾಲಯದಲ್ಲಿ ವಾಸಿಸುತ್ತಿರುವುದು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ದ್ರೌಪದಿ ಬೆಹರಾ, ತಮ್ಮ ಮಗಳು ಹಾಗೂ ಮೊಮ್ಮಗನೊಂದಿಗೆ ಶೌಚಾಲಯವನ್ನೇ ತಮ್ಮ ಮನೆಯಾಗಿಸಿ ವಾಸವಿದ್ದಾರೆ. ನಾನು ಇದೇ ಶೌಚಾಲಯದಲ್ಲಿ ಅಡುಗೆ ಮಾಡುವಾಗ ನನ್ನ ಕುಟುಂಬಸ್ಥರು ಹೊರಗಿರುತ್ತಾರೆ. ಮಲಗುವುದು ಕೂಡಾ ಅಲ್ಲೇ ಎಂದು ದ್ರೌಪದಿ ತಿಳಿಸಿದ್ದಾರೆ.
ಮನೆ ನಿರ್ಮಿಸಿಕೊಡಬೇಕಾಗಿ ಈಗಾಗಲೇ ಹಲವು ಬಾರಿ ಆಡಳಿತ ವರ್ಗಗಳಿಗೆ ಮನವಿ ಮಾಡಿದ್ದೇನೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದ್ರೌಪದಿ ಬೆಹರಾ ಅಳಲು ತೋಡಿಕೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರಾಮದ ಸರ್ಪಂಚ್ ಆಗಿರುವ ಬುಧುರಾಮ್ ಪುಟಿ, ನಾನಗೆ ಈ ಮಹಿಳೆಗೆ ಮನೆ ಕಟ್ಟಿಕೊಡುವ ಅಧಿಕಾರವಿಲ್ಲ. ಯಾವುದಾದರೂ ಯೋಜನೆಗಳು ಬಂದರೆ ಅವರಿಗೆ ಅದನ್ನು ಒದಗಿಸುತ್ತೇನೆ ಎಂದು ಹೇಳಿದ್ದಾರೆ.
ದೇಶ ಇಷ್ಟು ಮುಂದುವರಿದರೂ, ಇನ್ನೂ ಕೆಳಮಟ್ಟದಲ್ಲೇ ಇರುವ ವರ್ಗವೊಂದು ಸಮಾಜದಲ್ಲಿ ಇದೇ ಅನ್ನೋದು ನಾಗರಿಕ ಸಮಾಜ ತಲೆ ತಗ್ಗಿಸುವ ವಿಚಾರ.