ಶ್ರೀನಗರ (ಜಮ್ಮು - ಕಾಶ್ಮೀರ) : ಉತ್ತರ ಕಾಶ್ಮೀರದ ಕೇರನ್ ಸೆಕ್ಟರ್‌ನಲ್ಲಿ ಗಡಿದಾಟಿ ಒಳ ನುಸುಳಿದ್ದ ಉಗ್ರರ ಜತೆಗೆ ಗುಂಡಿನ ದಾಳಿ ನಡೆಸಿದೆ. ಗುಂಡಿನ ಚಕಮಕಿಯಲ್ಲಿ ಸೇನೆಯ ಐವರು ಯೋಧರು ಹುತಾತ್ಮರಾಗಿದ್ದಾರೆ. ಹಲವು ಉಗ್ರರು ಸಹ ಇದೇ ಕಾಳಗದಲ್ಲಿ ಬಲಿಯಾಗಿದ್ದಾರೆ.
ಕುಪ್ವಾರಾ ಜಿಲ್ಲೆಯ ವ್ಯಾಪ್ತಿಗೆ ಬರುವ ಕೇರನ್‌ನ ಪ್ರದೇಶಗಳಲ್ಲಿ ಮೂವರು ಸೇನಾ ಸಿಬ್ಬಂದಿ ಉಗ್ರರ ಗುಂಡುಗಳಿಗೆ ಹುತಾತ್ಮರಾಗಿದ್ದರು. ಇದಾದ ನಂತರ ನಡೆದ ಕಾರ್ಯಾಚರಣೆಯಲ್ಲಿ ಮತ್ತಿಬ್ಬರು ಹುತಾತ್ಮರಾಗಿದ್ದಾರೆ. ಇದರ ಜತೆಗೆ ನಮ್ಮ ಸೇನೆ ಕೂಡ ಸಮಾನ ಸಂಖ್ಯೆಯಲ್ಲಿ ಉಗ್ರರನ್ನು ಸದೆಬಡಿದಿದೆ ಎಂದು ರಕ್ಷಣಾ ವಕ್ತಾರರು ಮಾಹಿತಿ ನೀಡಿದ್ದಾರೆ.
ಭಯೋತ್ಪಾದಕರು ಶಮ್ಸಬರಿ ಮುಖಾಂತರ ಭಾರತೀಯ ಭೂಪ್ರದೇಶವನ್ನು ಪ್ರವೇಶಿಸಿ ಸೆಕ್ಟರ್‌ನ ಪೋಸ್ವಾಲ್ ಪ್ರದೇಶದಲ್ಲಿನ 'ಗುಜ್ಜರ್ ಧೋಕ್'(ಅಲೆಮಾರಿಗಳ ತಾತ್ಕಾಲಿಕ ಆಶ್ರಯ) ದಲ್ಲಿ ಅಡಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಭಾರೀ ಹಿಮ ಮತ್ತು ಕಷ್ಟಕರ ಭೂಪ್ರದೇಶವಾಗಿದ್ದರಿಂದ ಗಾಯಾಳುಗಳನ್ನು ಸ್ಥಳಾಂತರಿಸುವುದಕ್ಕೆ ಅಡ್ಡಿಯಾಗಿದೆ. ಕಾರ್ಯಾಚರಣೆ ಇನ್ನೂ ಪ್ರಗತಿಯಲ್ಲಿದೆ ಎಂದು ವಕ್ತಾರರು ತಿಳಿಸಿದ್ದಾರೆ.