ನವದೆಹಲಿ: ಕಳೆದ 24 ಗಂಟೆಯಲ್ಲಿ ವಿವಿಧ ರಾಜ್ಯದ 216 ಜಿಲ್ಲೆಗಳಲ್ಲಿ ಯಾವುದೇ ಹೊಸ ಕೋವಿಡ್ ಪ್ರಕರಣ ಕಂಡು ಬಂದಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲವ ಅಗರವಾಲ್ ಮಾಹಿತಿ ನೀಡಿದ್ದಾರೆ.
42 ಜಿಲ್ಲೆಗಳಲ್ಲಿ ಕಳೆದ 28 ದಿನಗಳಿಂದ ಯಾವುದೇ ಕೋವಿಡ್ ಪ್ರಕರಣ ಕಾಣಿಸಿಕೊಂಡಿಲ್ಲ ಎಂದು ಮಾಹಿತಿ ನೀಡಿರುವ ಅವರು, ಇಲ್ಲಿಯವರೆಗೆ 16,540 ಜನರು ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಕಳೆದ 24 ಗಂಟೆಯಲ್ಲಿ 3,390 ಹೊಸ ಕೇಸ್ಗಳು ಕಂಡು ಬಂದಿವೆ. 1,273 ಸೋಂಕಿತರು ಗುಣಮುಖರಾಗಿದ್ದು, ಚೇತರಿಸಿಕೊಳ್ಳುತ್ತಿರುವವರ ಪ್ರತಿಶತ ಇದೀಗ 29.36 ಆಗಿದೆ. ಸದ್ಯ 37,916 ಕೋವಿಡ್ ಪ್ರಕರಣಗಳಿದ್ದು 1,886 ಜನರು ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 1,216 ಕೇಸ್ ಕಾಣಿಸಿಕೊಂಡಿದ್ದಾಗಿ ಅವರು ವಿವರ ನೀಡಿದರು.
ದೇಶದಲ್ಲಿ ಈಗಾಗಲೇ ನಿರ್ಮಾಣ ಮಾಡಲಾಗಿರುವ ಕೆಂಪು, ಕಿತ್ತಳೆ ಹಾಗೂ ಹಸಿರು ವಲಯ ಪರಿಷ್ಕರಣೆ ಮಾಡುವ ನಿರ್ಧಾರ ರಾಜ್ಯಗಳಿಗೆ ಬಿಡಲಾಗಿದ್ದು, ಕೆಲವೇ ದಿನಗಳಲ್ಲಿ ಅದರ ಬಗ್ಗೆ ಅವು ಮಾಹಿತಿ ನೀಡಲಿವೆ. ಕೇಂದ್ರ ಸರ್ಕಾರ ಜಾರಿ ಮಾಡಿರುವ ನಿಯಮ ಸರಿಯಾಗಿ ಪಾಲನೆ ಮಾಡಿದರೆ ಯಾವುದೇ ಕಾರಣಕ್ಕೂ ದೇಶದಲ್ಲಿ ಹೆಚ್ಚು ಪ್ರಕರಣ ಕಾಣಿಸಿಕೊಳ್ಳುವುದಿಲ್ಲ. ಜನರು ಇದರ ಕಡೆ ಗಮನ ಹರಿಸಬೇಕು ಎಂದು ಅವರು ತಿಳಿಸಿದ್ದಾರೆ.
ಕೋವಿಡ್ ಸೋಂಕಿತರಿಗೆ ರೈಲ್ವೆಯಲ್ಲಿ 5231 ಕೊಚ್ ಬಳಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದ್ದು, ಅದಕ್ಕಾಗಿ ಈಗಾಗಲೇ 215 ಸ್ಟೇಷನ್ ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ.