ಬೆಂಗಳೂರು: ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದ್ದು, ಈಗಾಗಲೇ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿರುವ ಕಾಂಗ್ರೆಸ್ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮಹತ್ವದ ಕೆಲಸಕ್ಕಾಗಿ ನಾವು ಕರ್ನಾಟಕಕ್ಕೆ ಆಗಮಿಸಿದ್ದೇವೆ. ನಮಗೆ ಸೂಕ್ತ ಭದ್ರತೆಯ ಅವಶ್ಯಕತೆ ಇದೆ ಎಂದು ಶಾಸಕರು ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಪತ್ರ ಬರೆದಿದ್ದಾರೆ.

ದೇವನಹಳ್ಳಿಯ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ನಲ್ಲಿ ಸಚಿವರೂ ಸೇರಿದಂತೆ 19 ಶಾಸಕರು ತಂಗಿದ್ದು, ತಮಗೆ ಎಸ್ಕಾರ್ಟ್ ಒದಗಿಸಬೇಕೆಂದು ಸಹಿ ಮಾಡಿದ ಪತ್ರವನ್ನು ಸಲ್ಲಿಸಿದ್ದಾರೆ.ಕಾಂಗ್ರೆಸ್ ನ ಹಿರಿಯ ನಾಯಕ ಜ್ಯೋತಿರಾದಿತ್ಯ ಸಿಂದಿಯಾ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದಂತೆ ಎಲ್ಲ ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಪೊಲೀಸ್ ಸರ್ಪಗಾವಲು:
ಶಾಸಕರು ಉಳಿದುಕೊಂಡಿರುವ ರೆಸಾರ್ಟ್ಗೆ ಇದೀಗ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ರೆಸಾರ್ಟ್ ಗೇಟ್ಗಳ ಸುತ್ತ ಬ್ಯಾರಿಕೇಡ್ ಹಾಕಲಾಗಿದೆ. ಡಿವೈಎಸ್ಪಿ ರಂಗಪ್ಪ ನೇತೃತ್ವದಲ್ಲಿ ಸೆಕ್ಯೂರಿಟಿ ನೀಡಲಾಗಿದ್ದು, ಐವರು ಸಬ್ಇನ್ಸ್ಪೆಕ್ಟರ್, ಇಬ್ಬರು ಸರ್ಕಲ್ ಇನ್ಸ್ಪೆಕ್ಟರ್ ಹಾಗೂ ಎರಡು ಕೆಸ್ಎಸ್ಆರ್ಪಿ ತುಕಡಿ ನಿಯೋಜಿಸಲಾಗಿದೆ.