ಕೇರಳ: ಕೋಜಿಕೋಡ್ ಜಿಲ್ಲೆಯ ಅನಾಯಂಕುನಲ್ಲಿನ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಸುಮಾರು 150 ವಿದ್ಯಾರ್ಥಿಗಳು ಮತ್ತು 15 ಶಿಕ್ಷಕರು ಜ್ವರದಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆ ಶಾಲೆಯ ಎಲ್ಲಾ ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ ಎರಡು ದಿನ ರಜೆ ನೀಡಲಾಗಿದೆ.
ಕಳೆದ ಶುಕ್ರವಾರ ಏಕಾಏಕಿ 42 ವಿದ್ಯಾರ್ಥಿಗಳು ಜ್ವರವೆಂದು ರಜೆ ತೆಗೆದುಕೊಂಡರು. ಬಳಿಕ ಐದು ದಿನದಲ್ಲಿ ಸುಮಾರು 150 ವಿದ್ಯಾರ್ಥಿಗಳು ಮತ್ತು 15 ಶಿಕ್ಷಕರು ಜ್ವರವೆಂದು ರಜೆ ತೆಗೆದುಕೊಂಡರು. ನಂತರ ಜ್ವರವು ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಆವರಿಸಿಕೊಂಡಿತ್ತು. ಹೀಗೆ ಜ್ವರ ವ್ಯಾಪಿಸುತ್ತಿದ್ದಂತೆ ಅನಾಯಂಕುವಿನ ಸರ್ಕಾರಿ ಶಾಲೆ ಹಾಗೂ ಈ ಶಾಲೆ ಬಳಿ ಇರುವ ಎಲ್‌ಪಿ ಶಾಲೆಗೆ ಎರಡು ದಿನಗಳ ರಜೆ ನೀಡಲಾಗಿದೆ.
ಇನ್ನು ಜ್ವರದಿಂದ ಬಳಲುತ್ತಿದ್ದ ವಿದ್ಯಾರ್ಥಿಗಳ ರಕ್ತ ಪರೀಕ್ಷೆ ಮಾಡಿದ ಬಳಿಕ ಎಲ್ಲರೂ ಹೆಚ್1ಎನ್1ನಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ. ಎಲ್ಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಖಚಿತಪಡಿಸಿದೆ. ಹೆಚ್ಚುವರಿ ಡಿಎಂಒ ಆಶಾ ದೇವಿ ಮತ್ತು ವೈದ್ಯಕೀಯ ಅಧಿಕಾರಿ ಸಜ್ನಾ ನೇತೃತ್ವದ ತಂಡವು ಪಂಚಾಯಿತಿಯ ವಿವಿಧ ಭಾಗಗಳಲ್ಲಿ ತಪಾಸಣೆ ನಡೆಸಿ, ಮಾಹಿತಿ ಕಲೆಹಾಕಿದೆ.
ಒಂದು ವೈದ್ಯಕೀಯ ತಂಡವೂ ಅನಾಯಂಕುವಿನ ಹೈಯರ್ ಸೆಕೆಂಡರಿ ಶಾಲೆಗೆ ಭೇಟಿ ನೀಡಿ ಮಾಹಿತಿ ಕಲೆಹಾಕಿದೆ. ಅಲ್ಲದೇ ಆಡಳಿತ ಮಂಡಳಿ ಈ ಕಾಯಿಲೆ ನೀರಿನಿಂದ ಬಂದಿರಬಹುದೆಂದು ಹೇಳಿದೆ. ಇಂದು ಬೆಳಗ್ಗೆಯಿಂದ ಅನಾಯಂಕುವಿನ ಶಾಲೆಯಲ್ಲಿ ವೈದ್ಯಕೀಯ ಶಿಬಿರ ನಡೆಯಲಿದೆ. ಶಿಬಿರದಲ್ಲಿ ವೈದ್ಯಕೀಯ ಕಾಲೇಜಿನವರು ಸೇರಿದಂತೆ ತಜ್ಞ ವೈದ್ಯರು ಭಾಗವಹಿಸಲಿದ್ದಾರೆ.