ನವದೆಹಲಿ: ಅಕ್ಟೋಬರ್ ತಿಂಗಳ ಆರಂಭಕ್ಕೆ ಇನ್ನು ಒಂದು ದಿನ ಬಾಕಿ ಇದ್ದು ದೇಶದ ಹಲವೆಡೆ ವರುಣ ಮತ್ತೆ ಆರ್ಭಟಿಸುತ್ತಿದ್ದಾನೆ.
ದೇಶದ ಅತಿದೊಡ್ಡ ರಾಜ್ಯ ಉತ್ತರ ಪ್ರದೇಶ ಸೇರಿದಂತೆ ಗುಜರಾತ್, ಬಿಹಾರ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಪ್ರಮುಖವಾಗಿ ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಕಳೆದ ನಾಲ್ಕು ದಿನದಲ್ಲಿ ದೇಶಾದ್ಯಂತ ಮಳೆ ಹಾಗೂ ನೆರೆಯ ಕಾರಣಕ್ಕೆ 110 ಮಂದಿ ಬಲಿಯಾಗಿದ್ದಾರೆ.
ಉತ್ತರ ಪ್ರದೇಶದಲ್ಲೇ ಅತಿಹೆಚ್ಚು ಸಾವಿನ ವರದಿಯಾಗಿದ್ದು ಗುರುವಾರದಿಂದ ಮೂರು ದಿನದ ಅವಧಿಯಲ್ಲಿ ತನಕ ವರುಣಾರ್ಭಟಕ್ಕೆ 79 ಮಂದಿ ಸಾವನ್ನಪ್ಪಿದ್ದಾರೆ. ಗುರುವಾರ 36, ಶುಕ್ರವಾರ 18 ಹಾಗೂ ಶನಿವಾರ 25 ಮಂದಿ ಮಳೆಗೆ ಬಲಿಯಾಗಿದ್ದಾರೆ.
ಬಿಹಾರದಲ್ಲಿ ಮಳೆಯಿಂದ ಇಲ್ಲಿತನಕ 13 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಬಿಹಾರ, ಪಶ್ಚಿಮ ಬಂಗಾಳ ಹಾಗೂ ಗುಜರಾತ್ ರಾಜ್ಯಗಳಲ್ಲಿ ಇನ್ನೂ ಕೆಲ ದಿನಗಳ ಕಾಲ ಭಾರಿ ಮಳೆ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.