ಕೋಲ್ಕತ್ತಾ: ದೇಶದಲ್ಲಿ ಪಕ್ಷಾಂತರ ಪರ್ವ ಮುಂದುವರಿದಿದ್ದು, ಕಳೆದ ಮೂರು ದಿನಗಳ ಹಿಂದೆ ಗೋವಾದಲ್ಲಿ 10 ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಿಕೊಂಡಿದ್ದಾರೆ. ಇದೀಗ ಪಶ್ಚಿಮ ಬಂಗಾಳದ ಬಿಜೆಪಿ ಮುಖಂಡ ಮುಕುಲ್ ರಾಯ್ ಹೊಸ ಬಾಂಬ್ ಸಿಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಮುಕುಲ್ ರಾಯ್, ಕಾಂಗ್ರೆಸ್,ಸಿಪಿಎಂ ಹಾಗೂ ತೃಣಮೂಲ ಕಾಂಗ್ರೆಸ್ನ 107 ಶಾಸಕರು ನಮ್ಮೊಂದಿಗೆ ಸಂಪರ್ಕದಲ್ಲಿದ್ದು, ಆದಷ್ಟು ಬೇಗ ಬಿಜೆಪಿ ಸೇರಿಕೊಳ್ಳಲಿದ್ದಾರೆ ಎಂದು ಹೇಳಿದ್ದು, ತೃಣಮೂಲ ಕಾಂಗ್ರೆಸ್ನ 40 ಶಾಸಕರು ನಮ್ಮ ಜೊತೆ ಬರಲು ನಿರ್ಧರಿಸಿದ್ದಾರೆ ಎಂದು ತಿಳಿಸಿದ್ದಾರೆ.
ಈಗಾಗಲೇ ಪಶ್ಚಿಮ ಬಂಗಾಳದಲ್ಲಿ ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ತೃಣಮೂಲ ಕಾಂಗ್ರೆಸ್ನ ಐವರು ಶಾಸಕರು ಬಿಜೆಪಿ ಸೇರಿಕೊಂಡಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೆಲವರು ದುಡ್ಡಿನ ಆಸೆಗೆ ಪಕ್ಷಾಂತರವಾಗುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು.
294 ವಿಧಾನಸಭಾ ಸೀಟುಗಳನ್ನೊಳಗೊಂಡಿರುವ ಪಶ್ಚಿಮ ಬಂಗಾಳದಲ್ಲಿ 2016ರಲ್ಲಿ ಚುನಾವಣೆ ನಡೆದಾಗ ತೃಣಮೂಲ ಕಾಂಗ್ರೆಸ್ 211, ಕಾಂಗ್ರೆಸ್ 44, ಇತರೆ 10, ಸಿಪಿಎಂ 26 ಹಾಗೂ ಬಿಜೆಪಿ 03 ಕ್ಷೇತ್ರಗಳಲ್ಲಿ ಗೆಲುವು ಪಡೆದಿತ್ತು.