ಚಿತ್ತೂರು (ಆಂಧ್ರಪ್ರದೇಶ): ವಿವಾಹೇತರ ಸಂಬಂಧಕ್ಕೆ ಎರಡು ಮುದ್ದು ಮಕ್ಕಳು ಬಲಿಯಾಗಿವೆ. ಸುಂದರ ಪ್ರಪಂಚ ನೋಡಬೇಕಿದ್ದ 10 ತಿಂಗಳ ಅವಳಿ ಜವಳಿ ಮಕ್ಕಳ ಸಾವು ನೋಡುಗರ ಹೃದಯ ಝಲ್ ಎನಿಸಿದೆ. ಚಿತ್ತೂರಿನಲ್ಲಿ ಈ ದುರ್ಘಟನೆ ನಡೆದಿದೆ.
ಏನಿದು ಘಟನೆ:
ಮಹಿಳೆಯೊಬ್ಬಳು ತನ್ನ ಗಂಡನ ಸ್ನೇಹಿತ ಉದಯ್ ಕುಮಾರ್ ಎಂಬುವನ ಜೊತೆ ವಿವಾಹೇತರ ಸಂಬಂಧ ಹೊಂದಿದ್ದಳು. ಉದಯ್ ಆಟೋ ಡ್ರೈವರ್ ಆಗಿದ್ದಾನೆ. ಮಹಿಳೆಗೆ 10 ತಿಂಗಳ ಪುಣಾರ್ವಿ, ಪುನೀತ್ ಎಂಬ ಇಬ್ಬರು ಮಕ್ಕಳಿದ್ದರು. ಉದಯ್ ಕುಮಾರ್ ಮಹಿಳೆಯನ್ನು ತನ್ನೊಂದಿಗೆ ಬರಲು ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ಇದಕ್ಕೆ ಹೆದರಿದ ಮಹಿಳೆ ಆಟೋದಲ್ಲಿ ಮಕ್ಕಳೊಂದಿಗೆ ತೆರಳಿದ್ದಾಳೆ.
ಇದಾದ ಬಳಿಕ ಉದಯ್ ಅವಳಿ ಮಕ್ಕಳನ್ನು ಕೆರೆಗೆ ಎಸೆದು ಕೊಂದಿದ್ದಾನೆ. ನಂತರ ಇಬ್ಬರೂ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮಂಗಳವಾರ ಬೆಳಗ್ಗೆ ಕೃಷಿಕರೊಬ್ಬರು ಇವರನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಉದಯಕುಮಾರ್ ತನ್ನ ಹೆಂಡತಿಗೆ ಕಿರುಕುಳ ನೀಡುತ್ತಿದ್ದ ಮತ್ತು ಮಕ್ಕಳನ್ನು ಸರೋವರಕ್ಕೆ ಎಸೆದು ಕೊಂದಿದ್ದಾನೆ ಎಂದು ಪತಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಮೇಲೆ ಕೊಲೆ ಪ್ರಕರಣ ದಾಖಲಿಸಿದ್ದಾರೆ.