ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಸೈಬರ್ ದರೋಡೆಕೋರರ ಅಟ್ಟಹಾಸ ಎಷ್ಟರಮಟ್ಟಿಗೆ ಹೆಚ್ಚಿದೆ ಎಂದರೆ ಈಗ ಹಿರಿಯ ಅಧಿಕಾರಿಗಳು ಮತ್ತು ಸಚಿವರ ಹೆಸರಲ್ಲಿಯೂ ಜನರನ್ನು ವಂಚಿಸುವ ಪ್ರಯತ್ನಗಳು ನಡೆಯುತ್ತಿವೆ. ಇದೀಗ ರಾಜ್ಯದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಹೆಸರಿನಲ್ಲೂ ವಂಚನೆ ನಡೆಸಿದ ಪ್ರಕರಣ ಬಯಲಿಗೆ ಬಂದಿದೆ.
ಸಿಎಂ ಜೈರಾಮ್ ಪ್ರೊಫೈಲ್ ಫೋಟೋ ಹಾಕಿಕೊಂಡು ವಂಚನೆ ಮಾಡಿದ ಪ್ರಕರಣ ಇದಾಗಿದೆ. ವಾಟ್ಸ್ಆ್ಯಪ್ನಲ್ಲಿ ಸಿಎಂ ಜೈರಾಮ್ ಅವರ ಪ್ರೊಫೈಲ್ ಫೊಟೊ ಹಾಕಿಕೊಂಡ ವಂಚಕನೊಬ್ಬ, 'ಹಲೋ.. ನಾನು ಮುಖ್ಯಮಂತ್ರಿ ಜೈರಾಮ್ ಠಾಕೂರ್' ಎಂದು ವ್ಯಕ್ತಿಯೊಬ್ಬರಿಗೆ ಮೆಸೇಜ್ ಮಾಡಿದ್ದಾನೆ. 'ಗುಡ್ ಮಾರ್ನಿಂಗ್ ಸರ್, ಆದರೆ ಇದು ನಿಮ್ಮ ನಂಬರ್ ಅಲ್ಲವಲ್ಲ' ಎಂದು ಈ ಕಡೆಯಿಂದ ರಿಪ್ಲೈ ಹೋಗಿದೆ. ಅಂದರೆ ಸಿಎಂರಿಗೆ ಮೊದಲೇ ಪರಿಚಯವಿದ್ದ ವ್ಯಕ್ತಿಗಳಿಗೆ ವಂಚಿಸುವ ಉದ್ದೇಶವಿದ್ದುದು ಇದರಿಂದ ಸ್ಪಷ್ಟವಾಗುತ್ತದೆ.
'ಇದು ನನ್ನ ಮತ್ತೊಂದು ಸಂಖ್ಯೆ..' ಅಂತ ವಂಚಕ ಮೆಸೇಜ್ ಮಾಡುತ್ತಾನೆ. ಮತ್ತೆ ಮುಂದುವರಿದು ಚಾಟ್ ಆರಂಭಿಸುವ ವಂಚಕ, ನನಗೆ ನಿಮ್ಮ ಸಹಾಯ ಬೇಕಿದೆ. ನಾನೊಂದು ತುರ್ತು ಮೀಟಿಂಗ್ನಲ್ಲಿದ್ದೇನೆ. ನಾನು ಕೆಲ ಸೀಮಿತ ಕರೆಗಳನ್ನು ಮಾತ್ರ ಮಾಡಬಹುದು ಎನ್ನುತ್ತಾನೆ.
ಇದರ ನಂತರ, 'ನಿಮಗೆ ಅಮೆಜಾನ್ ಗಿಫ್ಟ್ ಕಾರ್ಡ್ ಬಗ್ಗೆ ಗೊತ್ತಾ' ಎಂದು ಕೇಳುತ್ತಾನೆ. ಇದಕ್ಕೆ ಮತ್ತೊಂದು ಬದಿಯ ವ್ಯಕ್ತಿಯು, 'ಇದು ಫ್ರಾಡ್ ಆಗಿದೆ. ನೀವೂ ಸಹ ಫ್ರಾಡ್' ಎಂದು ಮೆಸೇಜ್ ಮಾಡಿ ಆ ನಂಬರ್ ಬ್ಲಾಕ್ ಮಾಡುತ್ತಾನೆ.
ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರ ಪ್ರೊಫೈಲ್ ಫೋಟೋ (ಸಿಎಂ ಜೈರಾಮ್ ಪ್ರೊಫೈಲ್ ಫೋಟೋ ಹಾಕುವ ಮೂಲಕ ಸೈಬರ್ ವಂಚನೆ) ಹಾಕಿದ ವಾಟ್ಸ್ಆ್ಯಪ್ ಸಂಖ್ಯೆಯಿಂದ ಕೆಲವರಿಗೆ ಸಂದೇಶಗಳು ಬಂದಿರುವ ಬಗ್ಗೆ ದೂರುಗಳು ಬಂದಿವೆ ಎಂದು ಶಿಮ್ಲಾ ಸೈಬರ್ ಸೆಲ್ ಹೆಚ್ಚುವರಿ ಎಸ್ಪಿ ನರವೀರ್ ಸಿಂಗ್ ರಾಥೋಡ್ ಹೇಳಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಗಳ ಪತ್ತೆಗೆ ಪ್ರಯತ್ನ ನಡೆಸಲಾಗುತ್ತಿದೆ.
ಭಾರತದಲ್ಲಿ ನೆಲೆಸಿರುವ ನೈಜೀರಿಯಾ ಪ್ರಜೆಗಳು ಇಂತಹ ವಂಚನೆಗೆ ಯತ್ನಿಸುತ್ತಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಇಂಥ ಅಪರಾಧಿಗಳು ಹೆಚ್ಚಾಗಿ ಹಣಕ್ಕಾಗಿ ಬೇಡಿಕೆ ಇಡುತ್ತಾರೆ ಎಂದು ಸೈಬರ್ ಕ್ರೈಮ್ ಸೆಲ್ ಅಧಿಕಾರಿ ಹೇಳುತ್ತಾರೆ. ಇನ್ನು ಅನೇಕ ಬಾರಿ ಫೋನ್‌ಗೆ ಬಂದಿರುವ ಒಟಿಪಿ ಕೇಳಲಾಗುತ್ತದೆ. ಒಂದು ವೇಳೆ ಒಟಿಪಿ ಕೊಟ್ಟರೆ ವಂಚಕರು ಬ್ಯಾಂಕ್ ಖಾತೆಗೆ ಕನ್ನ ಹಾಕಿ ಮೋಸ ಮಾಡುತ್ತಾರೆ.
ಪ್ರಮುಖ ವ್ಯಕ್ತಿಗಳು, ಸರ್ಕಾರಿ ಇಲಾಖೆಗಳ ಮುಖ್ಯಸ್ಥರು ಮತ್ತು ಹಿರಿಯ ಅಧಿಕಾರಿಗಳ ವಾಟ್ಸ್ಆ್ಯಪ್ ಪ್ರೊಫೈಲ್ ಫೋಟೋಗಳನ್ನು ಹಾಕಿಕೊಂಡಿರುವ ಅಪರಿಚಿತ ಸಂಖ್ಯೆಗಳಿಂದ ಬರುವ ಸಂದೇಶಗಳನ್ನು ನಿರ್ಲಕ್ಷಿಸಿ ಮತ್ತು ಇಂಥ ನಂಬರುಗಳನ್ನು ಪರಿಶೀಲಿಸದೇ ಯಾವುದೇ ಸಂವಹನ ಅಥವಾ ವ್ಯವಹಾರ ಮಾಡಬೇಡಿ ಎಂದು ಸೈಬರ್ ಸೆಲ್ ಎಚ್ಚರಿಕೆ ನೀಡಿದೆ.
ಇದನ್ನು ಓದಿ:ಯುವತಿಯೊಂದಿಗೆ ನಗ್ನ ವಿಡಿಯೋ ಚೆಲ್ಲಾಟ.. ಇಂಜಿನಿಯರ್ನಿಂದ 25 ಲಕ್ಷ ದೋಚಿದ ಸೈಬರ್ ಖದೀಮರು!