ಚೆನ್ನೈ(ತಮಿಳುನಾಡು): ಪಂಚರಾಜ್ಯಗಳ ಚುನಾವಣೆ ಪೈಕಿ ಮಂಗಳವಾರ ತಮಿಳುನಾಡಿನಲ್ಲಿ ಒಂದೇ ಹಂತದಲ್ಲಿ 234 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ, ಸಿಎಂ ಪಳನಿಸ್ವಾಮಿ, ಡಿಎಂಕೆ ನಾಯಕ ಸ್ಟ್ಯಾಲಿನ್, ಎಂಎನ್ಎಮ್ ನಾಯಕ ಕಮಲ್ ಹಾಸನ್ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳ ಪ್ರಮುಖ ನಾಯಕರು ಪ್ರಚಾರ ನಡೆಸಿ, ಮತದಾರರ ಮನ ಗೆಲ್ಲುವ ಕೆಲಸ ಮಾಡಿದ್ದಾರೆ.
ಡಿಎಂಕೆ-ಎಐಎಡಿಎಂಕೆ ನಡುವೆ ನೇರ ಫೈಟ್
ಕಳೆದ ಮೂರು ದಶಕಗಳಿಂದ ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಎಂ. ಕರುಣಾನಿಧಿ ಹಾಗೂ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ(ಎಐಎಡಿಎಂಕೆ) ಜಯಲಲಿತಾ ನಡುವಿನ ಚುನಾವಣಾ ಕದನಗಳಿಗೆ ಸಾಕ್ಷಿಯಾಗಿದ್ದ ರಾಜ್ಯ, ಇದೇ ಮೊದಲ ಬಾರಿಗೆ ದ್ರಾವಿಡ ರಾಜಕಾರಣದ ಇಬ್ಬರು ಪ್ರಮುಖರು ಇಲ್ಲದೇ ಚುನಾವಣೆ ಎದುರಿಸುತ್ತಿದೆ.
2016ರಲ್ಲಿ ಜಯಲಲಿತಾ ನಿಧನರಾಗಿದ್ದು, ಅವರ ರಾಜಕೀಯ ಪ್ರತಿಸ್ಪರ್ಧಿ ಕರುಣಾನಿಧಿ ಅನಾರೋಗ್ಯದ ಕಾರಣ 2018ರಲ್ಲಿ ಕೊನೆಯುಸಿರೆಳೆದರು. ಇದಾದ ಬಳಿಕ 2019ರಲ್ಲಿ ತಮಿಳುನಾಡು ಲೋಕಸಭೆ ಚುನಾವಣೆಗೆ ಸಾಕ್ಷಿಯಾಗಿದ್ದು, ಇದರಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟ 39 ಸಂಸದೀಯ ಸ್ಥಾನಗಳ ಪೈಕಿ 37ರಲ್ಲಿ ಗೆಲುವು ದಾಖಲು ಮಾಡಿತ್ತು.
ಇದನ್ನೂ ಓದಿ: ನಾಳೆ ಅಸ್ಸೋಂನಲ್ಲಿ ಕೊನೆಯ ಹಂತದ ಮತದಾನ : 337 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
ಜಯಾ- ಕರುಣಾನಿಧಿ ಇಲ್ಲದ ಚುನಾವಣೆ
ಎಐಎಡಿಎಂಕೆ ನಾಯಕಿ ಜಯಲಲಿತಾ 140ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿ, ಆ ಕಾಲದ ಯಶಸ್ವಿ ನಟಿಯಾಗಿದ್ದರು. 'ಅಮ್ಮ' ಎಂಬ ಹೆಸರಿನಿಂದ ಫೇಮಸ್ ಆಗಿದ್ದರು. 1981ರಲ್ಲಿ ರಾಜಕೀಯ ಸೇರಿ ತಮ್ಮದೇ ಛಾಪು ಮೂಡಿಸಿದ್ರು. ಇನ್ನು 1957ರಲ್ಲಿ ರಾಜ್ಯ ವಿಧಾನಸಭೆ ಪ್ರವೇಶಿಸಿದ್ದ ಕರುಣಾನಿಧಿ 1969ರಲ್ಲಿ ಮುಖ್ಯಮಂತ್ರಿಯಾಗುತ್ತಾರೆ.
ಅಕ್ರಮ ಆಸ್ತಿ ಗಳಿಕೆ ಆರೋಪವಿದ್ದರೂ ಜಯಲಲಿತಾ 1991 ಹಾಗೂ 2016ರ ನಡುವೆ ಆರು ಬಾರಿ ಮುಖ್ಯಮಂತ್ರಿಯಾದರು. ಆದರೆ ಕರುಣಾನಿಧಿ ಇದರ ಮಧ್ಯೆ ನಾಲ್ಕು ಸಲ ಸಿಎಂ ಹುದ್ದೆ ಅಲಂಕರಿಸ್ದರು. ಎಐಎಡಿಎಂಕೆ ಅಮ್ಮ ಬ್ರಾಂಡ್ನಲ್ಲಿ ಕಡಿಮೆ ವೆಚ್ಚದ ಕ್ಯಾಂಟೀನ್, ನೀರು, ಔಷಧ, ಉಚಿತ ಲ್ಯಾಪ್ಟಾಪ್, ರೈತರಿಗೆ ಉಚಿತ ಬೀಜ, ಮದುವೆಗೆ ಚಿನ್ನ ಸೇರಿ ವಿವಿಧ ಯೋಜನೆ ಪ್ರಾರಂಭಿಸಿ ಜನ ಮೆಚ್ಚುಗೆ ಗಳಿಸಿದ್ದರು.
ಬಿಜೆಪಿ ಜತೆ ಎಐಎಡಿಎಂಕೆ, ಡಿಎಂಕೆ ಕೈ ಹಿಡಿದ ಕಾಂಗ್ರೆಸ್
ಇದಾದ ಬಳಿಕ ಎಐಎಡಿಎಂಕೆಗೆ ಪಳನಿಸ್ವಾಮಿ ಹಾಗೂ ಡಿಎಂಕೆಗೆ ಸ್ಟಾಲಿನ್ ಮುಖ್ಯಸ್ಥರಾಗಿದ್ದು, ಈ ಸಲದ ಚುನಾವಣೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಆದರೆ 2011ರಿಂದಲೂ ಡಿಎಂಕೆ ಅಧಿಕಾರದಿಂದ ದೂರು ಉಳಿದಿದೆ. ವಿಶೇಷವೆಂದರೆ 234 ವಿಧಾನಸಭೆ ಕ್ಷೇತ್ರಗಳ ಚುನಾವಣೆಯಲ್ಲಿ ಬಿಜೆಪಿ ಆಡಳಿತ ಪಕ್ಷ ಎಐಎಡಿಎಂಕೆ ಜೊತೆ ಹಾಗೂ ಕಾಂಗ್ರೆಸ್ ಡಿಎಂಕೆ ಜತೆ ಮೈತ್ರಿ ಮಾಡಿಕೊಂಡು ಚುನಾವಣಾ ಕಣಕ್ಕಿಳಿದಿವೆ.
ಎಲ್ಲ ಕ್ಷೇತ್ರಗಳಿಗೂ ಮಂಗಳವಾರ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಇಬ್ಬರು ಲೆಜೆಂಡ್ಗಳು ಇಲ್ಲದೇ ಇದೇ ಮೊದಲ ಸಲ ವಿಧಾನಸಭೆ ಚುನಾವಣೆ ನಡೆಯುತ್ತಿರುವುದು ತೀವ್ರ ಕುತೂಹಲ ಮೂಡಿಸಿದೆ.
3,998 ಅಭ್ಯರ್ಥಿಗಳು ಕಣದಲ್ಲಿ
ಬೆಳಗ್ಗೆ 7 ಗಂಟೆಯಿಂದ ಸಂಜೆ 6ರವರೆಗೆ ಮತದಾನ ನಡೆಯಲಿದ್ದು, ಒಟ್ಟು 6.28 ಕೋಟಿ ಜನರು 234 ಕ್ಷೇತ್ರಗಳಲ್ಲಿ 3,998 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. 3.18 ಕೋಟಿ ಮಹಿಳೆಯರು, 3.08 ಕೋಟಿ ಪುರುಷರು ಹಾಗೂ 7,200 ತೃತೀಯ ಲಿಂಗಿಗಳು ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.
ಪ್ರಮುಖವಾಗಿ ಆಡಳಿತ ಪಕ್ಷದ ಮುಖ್ಯಮಂತ್ರಿ ಯಡಪ್ಪಾಡಿ ಪಳನಿಸ್ವಾಮಿ, ಉಪ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ, ಡಿಎಂಕೆ ಮುಖ್ಯಸ್ಥ ಸ್ಟಾಲಿನ್, ಟಿಟಿವಿ ದಿನಕರನ್, ಎಂಎನ್ಎಂನ ಕಮಲ್ ಹಾಸನ್, ಬಿಜೆಪಿಯ ಅಣ್ಣಾಮಲೈ, ನಟಿ ಖುಸ್ಬೂ ರೇಸ್ನಲ್ಲಿದ್ದಾರೆ.