ನವದೆಹಲಿ : ರಾಜ್ಯದಲ್ಲಿ ಬಿ.ಎಸ್ ಯಡಿಯೂರಪ್ಪ ಅವರ ರಾಜೀನಾಮೆಯಿಂದ ತೆರವಾಗಿದ್ದ ಮುಖ್ಯಮಂತ್ರಿ ಸ್ಥಾನಕ್ಕೆ ಬಸವರಾಜ ಎಸ್ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಲಾಗಿದೆ. ಮಂಗಳವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಿಎಸ್ವೈ ಉತ್ತರಾಧಿಕಾರಿಯಾಗಿ ಬೊಮ್ಮಾಯಿ ಅವರಿಗೆ ಸ್ಥಾನ ನೀಡಲಾಗಿದೆ. ನೂತನ ಮುಖ್ಯಮಂತ್ರಿ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಮಾಜಿ ಸಿಎಂ ಮಗ ನೂತನ ಸಿಎಂ : ರಾಜ್ಯದ ನೂತನ ಸಿಎಂ ಬಸವರಾಜ ಬೊಮ್ಮಾಯಿ ಉತ್ತರ ಕರ್ನಾಟಕದ ಲಿಂಗಾಯತ ಸಮುದಾಯದ ಪ್ರಭಾವಿ ಮುಖಂಡರಲ್ಲಿ ಒಬ್ಬರು. ಅಲ್ಲದೇ ಮಾಜಿ ಮುಖ್ಯಮಂತ್ರಿ ಎಸ್. ಆರ್. ಬೊಮ್ಮಾಯಿ ಅವರ ಪುತ್ರರಾಗಿದ್ದಾರೆ. ಎಸ್. ಆರ್ ಬೊಮ್ಮಾಯಿ ಅವರು 1988 ರಿಂದ 1989 ರವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಜವಾಬ್ದಾರಿ ವಹಿಸಿದ್ದರು.
ಅರವತ್ತೊಂದು ವರ್ಷ ವಯಸ್ಸಿನ ಬೊಮ್ಮಾಯಿ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಗೃಹ, ಕಾನೂನು, ಸಂಸದೀಯ ಮತ್ತು ಶಾಸಕಾಂಗ ವ್ಯವಹಾರಗಳ ಖಾತೆಗಳನ್ನು ನಿಭಾಯಿಸಿದ ಅನುಭವ ಹೊಂದಿದ್ದಾರೆ.
ದೇಶದಾದ್ಯಂತ ಮುಖ್ಯಮಂತ್ರಿ ಸ್ಥಾನಕ್ಕೇರಿದ ಅಪ್ಪ-ಮಕ್ಕಳು ಯಾರ್ಯಾರು?
ಹೆಚ್.ಡಿ ದೇವೇಗೌಡ - ಹೆಚ್.ಡಿ ಕುಮಾರಸ್ವಾಮಿ
ಬೊಮ್ಮಾಯಿ ಅವರಿಗಿಂತ ಮೊದಲು ರಾಜ್ಯದಲ್ಲಿ ಸಿಎಂ ಸ್ಥಾನಕ್ಕೇರಿದ ಇನ್ನೊಂದು ಅಪ್ಪ-ಮಗ ಜೋಡಿ ಹೆಚ್.ಡಿ ದೇವೇಗೌಡ ಮತ್ತು ಅವರ ಮಗ ಹೆಚ್.ಡಿ ಕುಮಾರಸ್ವಾಮಿ. ದೇಶದ ಪ್ರಧಾನಿಯಾಗಿ ಕರ್ತವ್ಯ ನಿರ್ವಹಿಸಿರುವ ದೇವೇಗೌಡರು, ರಾಜ್ಯದ ಸಿಎಂ ಕೂಡ ಆಗಿದ್ದರು.
ಎಂ. ಕರುಣಾನಿಧಿ - ಎಂ.ಕೆ ಸ್ಟಾಲಿನ್
ತಮಿಳುನಾಡಿದ ಹಾಲಿ ಸಿಎಂ ಎಂ.ಕೆ ಸ್ಟಾಲಿನ್ ಮಾಜಿ ಸಿಎಂ ಎಂ.ಕರುಣಾ ನಿಧಿ ಅವರ ಮಗನಾಗಿದ್ದಾರೆ. ದ್ರಾವಿಡ ನಾಯಕ ಕರುಣಾನಿಧಿ ನಿಧನದ ಬಳಿಕ ಡಿಎಂಕೆ ಪಕ್ಷದ ಚುಕ್ಕಾಣಿ ಹಿಡಿದ ಸ್ಟಾಲಿನ್, ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿ ಸಿಎಂ ಪಟ್ಟಕ್ಕೇರಿದ್ದಾರೆ.
ರಾಜಶೇಖರ ರೆಡ್ಡಿ- ವೈ. ಎಸ್ ಜಗನ್ ಮೋಹನ್ ರೆಡ್ಡಿ
ಆಂಧ್ರ ಪ್ರದೇಶದ ಹಾಲಿ ಸಿಎಂ ವೈ.ಎಸ್ ಜಗನ್ ಮೋಹನ್ ರೆಡ್ಡಿ ಮಾಜಿ ಸಿಎಂ ರಾಜಶೇಖರ ರೆಡ್ಡಿ ಅವರ ಮಗ. ದಕ್ಷಿಣ ಭಾರತದ ಕಾಂಗ್ರೆಸ್ ನಾಯಕರಾಗಿದ್ದ ರಾಜಶೇಖರ ರೆಡ್ಡಿ ಅವರ ಅಕಾಲಿಕ ನಿಧನದ ಬಳಿಕ, ನೂತನ ವೈಎಸ್ಆರ್ ಕಾಂಗ್ರೆಸ್ ಪಕ್ಷ ಕಟ್ಟಿದ ಜಗನ್, ತೆಲುಗು ಮಣ್ಣಿನಲ್ಲಿ ಹೊಸ ರಾಜಕೀಯ ಇತಿಹಾಸ ಬರೆದಿದ್ದಾರೆ.
ಒಡಿಶಾದ ಪಟ್ನಾಯಕ್ ಪರಿವಾರ :
ಒಡಿಶಾದ ಹಾಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ ಪುತ್ರ. 1997 ರಲ್ಲಿ, ತಂದೆಯ ಮರಣದ ನಂತರ ರಾಜಕೀಯಕ್ಕೆ ಕಾಲಿಟ್ಟ ನವೀನ್ ಪಟ್ನಾಯಕ್, ಒಂದು ವರ್ಷದ ನಂತರ ತಂದೆ ಬಿಜು ಪಟ್ನಾಯಕ್ ಹೆಸರಿನಲ್ಲಿ ಬಿಜು ಜನತಾದಳವನ್ನು ಸ್ಥಾಪಿಸಿದರು. ನಂತರ ಬಿಜು ಜನತಾದಳವು ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿ ಬಿಜೆಪಿಯೊಂದಿಗೆ ಸರ್ಕಾರವನ್ನು ರಚಿಸಿತು. ಹೊಸ ಸರ್ಕಾರದಲ್ಲಿ ನವೀನ್ ಪಟ್ನಾಯಕ್ ಮುಖ್ಯಮಂತ್ರಿಯಾದರು.
ಶಿಬು ಸೊರೆನ್ - ಹೇಮಂತ್ ಸೊರೆನ್
ಕಳೆದ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸುವ ಮೂಲಕ ಹೇಮಂತ್ ಸೊರೆನ್ ಜಾರ್ಖಂಡ್‌ನ ಸಿಎಂ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಹೇಮಂತ್ ಸೊರೆನ್ ಅವರ ತಂದೆ ಶಿಬು ಸೊರೆನ್ ಕೂಡ ರಾಜ್ಯದ ಉಸ್ತುವಾರಿ ವಹಿಸಿಕೊಂಡಿದ್ದರು.
ಪಿಎ ಸಂಗ್ಮಾ-ಕಾನ್ರಾಡ್ ಸಂಗ್ಮಾ
ತಂದೆಯ ನಂತರ ರಾಜ್ಯದ ಉನ್ನತ ಹುದ್ದೆಯನ್ನು ಅಲಂಕರಿಸುವಲ್ಲಿ ಯಶಸ್ವಿಯಾದ ದೇಶದ ಆಯ್ದ ಮುಖ್ಯಮಂತ್ರಿಗಳಲ್ಲಿ ಈಶಾನ್ಯ ರಾಜ್ಯ ಮೇಘಾಲಯದ ಕೊನ್ರಾಡ್ ಸಂಗ್ಮಾ ಕೂಡ ಒಬ್ಬರು. ಪಿಎ ಸಂಗ್ಮಾ ಅವರ ನಿಧನದ ನಂತರ ಮಗ ಕೊನ್ರಾಡ್ ಸಂಗ್ಮಾ 2016 ರಲ್ಲಿ ರಾಜ್ಯದ ಆಡಳಿತವನ್ನು ವಹಿಸಿಕೊಂಡರು.
ಡೋರ್ಜಿ ಖಂಡು - ಪೆಮಾ ಖಂಡು
ಮೇಘಾಲಯದ ನೆರೆಯ ರಾಜ್ಯ ಅರುಣಾಚಲ ಪ್ರದೇಶದಲ್ಲಿಯೂ ತಂದೆ- ಮಗ ಸಿಎಂಗಳಾಗಿದ್ದಾರೆ. ಅರುಣಾಚಲದ ಮಾಜಿ ಸಿಎಂ ಪೆಮಾ ಖಂಡು ಮತ್ತು ಅವರ ತಂದೆ ಡೋರ್ಜಿ ಖಂಡು ರಾಜ್ಯದ ಮುಖ್ಯಮಂತ್ರಿಗಳಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
ಮುಲಾಯಂ ಸಿಂಗ್-ಅಖಿಲೇಶ್ ಯಾದವ್
ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಮುಖಂಡರಾದ ಮುಲಾಯಂ ಸಿಂಗ್ ಯಾದವ್ ಮತ್ತು ಅವರ ಮಗ ಅಖಿಲೇಶ್ ಯಾದವ್ ಸಿಎಂ ಪಟ್ಟಕ್ಕೇರಿದ್ದಾರೆ.
ಜಮ್ಮು ಕಾಶ್ಮೀರದ ಅಬ್ದುಲ್ಲಾ ಕುಟುಂಬ
ಜಮ್ಮು ಕಾಶ್ಮೀರದ ಅಬ್ದುಲ್ಲಾ ಕುಟುಂಬದ ಮೂರು ತಲೆಮಾರುಗಳಿಗೆ ರಾಜ್ಯದ ಮುಖ್ಯಮಂತ್ರಿಯಾಗುವ ಭಾಗ್ಯ ಸಿಕ್ಕಿದೆ. ಮೊದಲು ಶೇಖ್ ಅಬ್ದುಲ್ಲಾ ಕಣಿವೆ ರಾಜ್ಯದ ಸಿಎಂ ಆಗಿದ್ದರು. ಅವರ ಬಳಿಕ ಮಗ ಫಾರೂಕ್ ಅಬ್ದುಲ್ಲಾ ನಂತರ ಅವರ ಮಗ ಒಮರ್ ಅಬ್ದುಲ್ಲಾ ಸಿಎಂ ಆಗಿದ್ದರು.
ಶಂಕರ್ ರಾವ್ ಚವ್ಹಾಣ್ - ಅಶೋಕ್ ಚವ್ಹಾಣ್
ಅಶೋಕ್ ಚವ್ಹಾಣ್ ಮತ್ತು ಅವರ ತಂದೆ ಶಂಕರ್ ರಾವ್ ಚವ್ಹಾಣ್ ಮಹಾರಾಷ್ಟ್ರದ ಸಿಎಂಗಳಾಗಿದ್ದರು.
ಹರಿಯಾಣದ ಚೌಟಲಾ ಕುಟುಂಬ
ಹರಿಯಾಣದ ಚೌಟಲಾ ಕುಟುಂಬ ಕೂಡ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ದೇವಿ ಲಾಲ್ ನಂತರ ಅವರ ಪುತ್ರ ಓಂ ಪ್ರಕಾಶ್ ಚೌಟಲಾ ರಾಜ್ಯದ ಚುಕ್ಕಾಣಿ ಹಿಡಿದಿದ್ದರು.
ಮೆಹಬೂಬ ಮುಫ್ತಿ - ಮುಫ್ತಿ ಮೊಹಮ್ಮದ್ ಸಯೀದ್
ಸಿಎಂ ಸ್ಥಾನ ಅಲಂಕರಿಸಿದ ಕಣಿವೆ ರಾಜ್ಯ ಜಮ್ಮು ಕಾಶ್ಮೀರ ಮತ್ತೊಂದು ಕುಟುಂಬ ಮುಫ್ತಿ ಕುಟುಂಬ. ಕಾಶ್ಮೀರ ಕೊನೆಯ ಸಿಎಂ ಮತ್ತು ಮೊದಲ ಮಹಿಳಾ ಸಿಎಂ ಆಗಿ ಕಾರ್ಯ ನಿರ್ವಹಿಸಿದ ಪಿಡಿಪಿ ಪಕ್ಷದ ಮುಖ್ಯಸ್ಥೆ ಮೆಹಬೂಬ ಮುಫ್ತಿ, ಮಾಜಿ ಸಿಎಂ ಮುಫ್ತಿ ಮೊಹಮ್ಮದ್ ಸಯೀದ್ ಅವರ ಪುತ್ರಿಯಾಗಿದ್ದಾರೆ.