ಮುಂಬೈ : ಸುಮಾರು ಒಂದು ವಾರದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯ ಬಳಿಕ ಬಾರ್ಜ್ P-305 ದುರಂತದಲ್ಲಿ ನಾಪತ್ತೆಯಾದವರ ಎಲ್ಲರ ಮೃತದೇಹಗಳು ಪತ್ತೆಯಾಗಿವೆ. ನೌಕಾ ದುರಂತದಲ್ಲಿ ಒಟ್ಟು 86 ಮಂದಿ ಸಾವನ್ನಪ್ಪಿದ್ದು, 188 ಜನರನ್ನು ರಕ್ಷಿಸಲಾಗಿದೆ.
ಮೇ 17ರಂದು ತೌಕ್ತೆ ಚಂಡಮಾರುತದ ಆರ್ಭಟದಿಂದಾಗಿ ಮುಂಬೈ ತಟದ ಅರಬ್ಬೀ ಸಮುದ್ರದಲ್ಲಿ P-305 ಬೋಟ್ ಕೊಚ್ಚಿ ಹೋಗಿತ್ತು. ಸಿಬ್ಬಂದಿಯೂ ಸೇರಿದಂತೆ ನೌಕೆಯಲ್ಲಿ 274 ಜನರಿದ್ದರು. ಸತತ ಆರು ದಿನಗಳ ಕಾಲ ನೌಕಾಪಡೆ ಹಾಗೂ ವಾಯುಪಡೆ ರಕ್ಷಣಾ-ಶೋಧ ಕಾರ್ಯಾಚರಣೆ ನಡೆಸಿತ್ತು.
ಸಮುದ್ರದಲ್ಲಿ ಸಿಲುಕಿದ್ದ 188 ಮಂದಿಯನ್ನು ರಕ್ಷಿಸಲಾಗಿತ್ತು ಹಾಗೂ 70 ಶವಗಳನ್ನು ಹೊರ ತೆಗೆಯಲಾಗಿತ್ತು. ಮಹಾರಾಷ್ಟ್ರದ ರಾಯಗಢ್ ಜಿಲ್ಲೆಯ ಕರಾವಳಿ ತೀರಗಳಲ್ಲಿ ಹಾಗೂ ಗುಜರಾತ್ನ ವಲ್ಸಾದ್ ಕಡಲ ತೀರದಲ್ಲಿ ತಲಾ 8 ಶವಗಳು ಸಿಕ್ಕಿದ್ದವು. ಹೀಗಾಗಿ, ಎಲ್ಲಾ 274 ಮಂದಿಯ ಲೆಕ್ಕ ಸಿಕ್ಕಿದಂತಾಗಿದೆ.
ಇದನ್ನೂ ಓದಿ: ನೌಕಾ ದುರಂತ: ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ ಒಎನ್‌ಜಿಸಿ, ಅಫ್ಕಾನ್
ಹಲವು ಮೃತದೇಹಗಳನ್ನು ಮೃತರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಆದರೆ, ಸಾಕಷ್ಟು ಶವಗಳು ಕೊಳೆತ ಮತ್ತು ಗುರುತಿಸಲಾಗದ ಸ್ಥಿತಿಯಲ್ಲಿ ಪತ್ತೆಯಾಗುತ್ತಿವೆ.
ಹೀಗಾಗಿ, ಸಂಬಂಧಿಕರ ಡಿಎನ್‌ಎ ಮಾದರಿ ಪಡೆಯಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ತನಿಖೆಗಾಗಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಮೂರು ಸದಸ್ಯರ ಸಮಿತಿಯನ್ನು ರಚಿಸಿದೆ.
ನೌಕಾ ದುರಂತದ ಮೃತರ ಪ್ರತಿ ಕುಟುಂಬಕ್ಕೆ 35 ರಿಂದ 75 ಲಕ್ಷ ರೂಪಾಯಿವರೆಗೆ ಪರಿಹಾರ ನೀಡುವುದಾಗಿ ಮುಂಬೈ ಮೂಲದ ನಿರ್ಮಾಣ ಮತ್ತು ಎಂಜಿನಿಯರಿಂಗ್ ಕಂಪನಿಯಾದ ಅಫ್ಕಾನ್ಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಘೋಷಿಸಿದೆ.
ಮೃತರ ಮತ್ತು ನಾಪತ್ತೆಯಾದವರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಹಾಗೂ ಬದುಕುಳಿದವರಿಗೆ ತಲಾ 1 ಲಕ್ಷ ರೂ. ಪರಿಹಾರ ನೀಡುವುದಾಗಿ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್‌ಜಿಸಿ) ತಿಳಿಸಿದೆ.