ವಾರಂಗಲ್ (ತೆಲಂಗಾಣ): ತೆಲಂಗಾಣ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಹಣದ ಹೊಳೆ ಹರಿಯುತ್ತಿದೆ. ವಾರಂಗಲ್ನಲ್ಲಿ ಶುಕ್ರವಾರ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದರ ಬಾನೆಟ್‌ನಡಿ ಬಚ್ಚಿಟ್ಟಿದ್ದ 50 ಲಕ್ಷ ರೂಪಾಯಿ ಹಣ ತುಂಬಿದ್ದ ಬ್ಯಾಗ್ ಕಳವು ಮಾಡಲಾಗಿದೆ. ಇನ್ನೊಂದು ಘಟನೆಯಲ್ಲಿ ವಿಕಾರಾಬಾದ್ ಜಿಲ್ಲೆಯ ಬಶೀರಾಬಾದ್ನಲ್ಲಿ ಪತ್ರಕರ್ತರಿಂದ 44 ಲಕ್ಷ ರೂಪಾಯಿ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಾರಂಗಲ್ ಜಿಲ್ಲೆಯಲ್ಲಿ ಯಾವುದೋ ಪಕ್ಷದ ಅಭ್ಯರ್ಥಿಗೆ ಸೇರಿದ ಹಣದ ಬ್ಯಾಗ್ ಅನ್ನು ಪೊಲೀಸರಿಗೆ ಸಿಗದಂತೆ ಕಾರಿನ ಬಾನೆಟ್ನಲ್ಲಿ ಇಟ್ಟು ಸಾಗಿಸಲಾಗುತ್ತಿತ್ತು. ಈ ವೇಳೆ ಕಾರು ವಾರಂಗಲ್-ಖಮ್ಮಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ, ಬೆಂಕಿ ಕಾಣಿಸಿಕೊಂಡಿದೆ. ಕಾರಿನಲ್ಲಿದ್ದವರು ಬಿಟ್ಟು ಓಡಿ ಹೋಗಿದ್ದಾರೆ. ಇದೇ ಮಾರ್ಗವಾಗಿ ಸಾಗುತ್ತಿದ್ದ ದಾರಿಹೋಕರೊಬ್ಬರು ಕೆಲವು ಸುಟ್ಟ ನೋಟುಗಳನ್ನು ಗಮನಿಸಿ ಬಾನೆಟ್ ಅಡಿಯಲ್ಲಿ ಬಚ್ಚಿಟ್ಟಿದ್ದ ಬ್ಯಾಗ್ ಅನ್ನು ಕದ್ದು, ಸ್ಥಳದಿಂದ ಪರಾರಿಯಾಗಿದ್ದಾನೆ. ಬ್ಯಾಗ್ನಲ್ಲಿ ಸುಮಾರು 50 ಲಕ್ಷ ರೂಪಾಯಿ ಇತ್ತು ಎಂದು ಹೇಳಲಾಗಿದೆ.
ವಾರಂಗಲ್ ಪೂರ್ವ ವಲಯ ಡಿಸಿಪಿ ರವೀಂದರ್ ಹಾಗೂ ಮಾಮನೂರು ಎಸಿಪಿ ಸತೀಶ್ ಬಾಬು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಣದ ಮಾಲೀಕರು ಯಾರು ಮತ್ತು ಏಕೆ ಹಣವನ್ನು ಸಾಗಿಸುತ್ತಿದ್ದರು. ಹಣದ ಬ್ಯಾಗ್ ಯಾರು ಕದ್ದರು ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ. ಕಾರನ್ನು ಮಣಿರಾಜು ಚಕಿಲಾ ಎಂಬಾತನ ಹೆಸರಿನಲ್ಲಿ ಮುಸರಾಂಬಾಗ್ ವಿಳಾಸದಲ್ಲಿ ನೋಂದಾಯಿಸಲಾಗಿದೆ. ಚುನಾವಣೆಯಲ್ಲಿ ಮತದಾರರಿಗೆ ಹಂಚಲು ಹಣ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ರಕರ್ತರಿಂದ ಲಕ್ಷಗಟ್ಟಲೆ ಹಣ ವಶ: ಇನ್ನೊಂದು ಪ್ರಕರಣದಲ್ಲಿ ವಿಕಾರಾಬಾದ್ ಜಿಲ್ಲೆಯ ಬಶೀರಾಬಾದ್ ಮಂಡಲದಲ್ಲಿ ಪತ್ರಕರ್ತರಿಂದ 44 ಲಕ್ಷಕ್ಕೂ ಹೆಚ್ಚು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗುರುವಾರ ಮಧ್ಯರಾತ್ರಿ ತಪಾಸಣೆ ನಡೆಸುತ್ತಿದ್ದ ಪೊಲೀಸರು, ಬಶೀರಾಬಾದ್‌ನಿಂದ ರೈಲು ನಿಲ್ದಾಣದ ಗೇಟ್ ಕಡೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಪತ್ರಕರ್ತರನ್ನು ತಡೆದು ತಪಾಸಣೆ ನಡೆಸಿದ್ದಾರೆ.
ಈ ವೇಳೆ ಅವರ ವಾಹನದಲ್ಲಿ 44.84 ಲಕ್ಷ ರೂಪಾಯಿ ಇರುವುದು ಪತ್ತೆಯಾಗಿದೆ. ಅಭ್ಯರ್ಥಿಯ ಪರವಾಗಿ ಮತದಾರರಿಗೆ ನೀಡಲು ಸಾಗಿಸಲಾಗುತ್ತಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ. ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್‌ಐ ವೇಣುಗೋಪಾಲಗೌಡ ತಿಳಿಸಿದ್ದಾರೆ.
ಇದಕ್ಕೂ ಕೆಲ ದಿನಗಳ ಹಿಂದೆ ರಂಗಾರೆಡ್ಡಿ ಜಿಲ್ಲೆಯ ಅಂಬರ್ಪೇಟ್ನಲ್ಲಿ ಅಪಾರ ಪ್ರಮಾಣದ ನಗದನ್ನು ವಶಪಡಿಸಿಕೊಳ್ಳಲಾಗಿತ್ತು. ಚೌಟುಪ್ಪಲ್ ಸಾಗಿಸುತ್ತಿದ್ದ ಕಾರಿನಲ್ಲಿ 2 ಕೋಟಿ ರೂಪಾಯಿ ನಗದನ್ನು ಅಧಿಕಾರಿಗಳು ಪತ್ತೆ ಮಾಡಿದ್ದರು. ದಾಖಲೆ ಇಲ್ಲದ ಕಾರಣ ಹಣವನ್ನು ಪೊಲೀಸರು ಜಪ್ತಿ ಮಾಡಿದ್ದರು. ಇದು ರಿಯಲ್ ಎಸ್ಟೇಟ್ ದಂಧೆಗೆ ಸಂಬಂಧಿಸಿದ್ದು ಎಂದು ಹೇಳಲಾಗಿದ್ದರೂ, ತನಿಖೆ ನಡೆಯುತ್ತಿದೆ. ಇನ್ನೊಂದೆಡೆ ನಾಚಾರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾಗ ವಿವಿಧ ವಾಹನಗಳಲ್ಲಿ ಸಾಗಿಸುತ್ತಿದ್ದ ದಾಖಲೆ ರಹಿತ ಒಂದು ಲಕ್ಷ ರೂಪಾಯಿ ಹಣವನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ರಾಜಸ್ಥಾನದಲ್ಲಿ ಝಣ ಝಣ ಕಾಂಚಾಣ: 690 ಕೋಟಿ ರೂಪಾಯಿ ನಗದು, ಮದ್ಯ, ಡ್ರಗ್ಸ್ ವಶ