ಖರಗೋನ್ (ಮಧ್ಯ ಪ್ರದೇಶ) : ಜಿಲ್ಲೆಯ ಆದಿವಾಸಿಗಳು ಹೆಚ್ಚಾಗಿ ವಾಸಿಸುವ ಪ್ರದೇಶವಾದ ಝಿರನಿಯಾ ವಿಕಾಸಖಂಡ ಎಂಬಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಇಲ್ಲೊಂದು ಅದ್ಭುತ ಮಗು ಜನಿಸಿದ್ದು, ಈ ಮಗುವನ್ನು ನೋಡಲು ಜನ ತಂಡೋಪತಂಡವಾಗಿ ಆಗಮಿಸಿದ್ದರು. ಈ ನವಜಾತ ಶಿಶುವಿಗೆ ಹುಟ್ಟುತ್ತಲೇ ಬಾಯಲ್ಲಿ 32 ಹಲ್ಲುಗಳಿದ್ದವು. ಆದರೆ, ಹುಟ್ಟಿದ ಕೆಲ ಗಂಟೆಗಳಲ್ಲೇ ಈ ಮಗು ಮೃತ ಪಟ್ಟಿದೆ.
ಖರಗೋನ್ ಜಿಲ್ಲೆಯ ಆದಿವಾಸಿ ಪ್ರದೇಶಕ್ಕೆ ಹತ್ತಿರದ ಕೋಡಿಖಾಲ್ ಎಂಬ ಗ್ರಾಮವೊಂದರ ಮಹಿಳೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿತ್ತು. ಈ ಮಹಿಳೆಗೆ ಜನಿಸಿದ ಮಗುವಿಗೆ ಹುಟ್ಟುತ್ತಲೇ ಬಾಯಲ್ಲಿ ಮೂವತ್ತೆರಡೂ ಹಲ್ಲು ಮೂಡಿದ್ದವು. ಈ ಅದ್ಭುತವಾದ ಮಗು ಸಂಪೂರ್ಣವಾಗಿ ಬೆಳೆದಿದ್ದರೂ ಹುಟ್ಟಿ 11 ಗಂಟೆಗಳಲ್ಲಿಯೇ ಪ್ರಾಣ ಬಿಟ್ಟಿದೆ.
ಕಳೆದ ಶುಕ್ರವಾರ ಗರ್ಭಿಣಿ ರೂಪಾಬಾಯಿ ಎಂಬುವಳು ಬೆಳಗ್ಗೆ 8.20ರ ಸುಮಾರಿಗೆ ಮಗುವಿಗೆ ಜನ್ಮ ನೀಡಿದ್ದಳು. ಇದೇ ದಿನ ಮಧ್ಯಾಹ್ನ 2.30ರ ಸುಮಾರಿಗೆ ತಾಯಿ - ಮಗುವನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು. ಆದರೆ, ಮನೆಗೆ ಹೋದ ಮೇಲೆ ಅವತ್ತೇ ರಾತ್ರಿ 7.30ರ ಸುಮಾರಿಗೆ ಮಗು ಮೃತಪಟ್ಟಿದೆ. ಮಗು ಮೃತಪಟ್ಟ ನಂತರ ಮಗುವಿನ ಬಾಯಿ ತೆರೆದು ನೋಡಿದಾಗ ಮಗುವಿಗೆ 32 ಹಲ್ಲು ಮೂಡಿರುವುದು ಮನೆಯವರಿಗೆ ತಿಳಿದಿದೆ. ಶಿಶು ಸಾಯುವ ಮುನ್ನ ಈ ಬಗ್ಗೆ ತಮಗೆ ತಿಳಿದೇ ಇರಲಿಲ್ಲ ಎಂದು ಕುಟುಂಬಸ್ಥರು ಹೇಳಿದ್ದಾರೆ.
ಹೀಗೆ ಹುಟ್ಟುತ್ತಲೇ 32 ಹಲ್ಲು ಇರುವ ಮಗು ಜನಿಸುವುದು ಅತಿ ದುರ್ಲಭ ಘಟನೆಗಳಲ್ಲೊಂದು. ಆದರೆ, ಇಂಥ ಶಿಶುಗಳು ಜನಿಸುವುದು ಅಸಂಭವವೇನಲ್ಲ ಎಂದು ಮಗು ಜನಿಸಿದ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ. ದೀಪಕ ಶಸ್ತ್ರೆ ಹೇಳಿದ್ದಾರೆ.