ನವದೆಹಲಿ: ಎಟಿಎಂನಿಂದ ಹಣ ಪಡೆಯುವ ಮಿತಿ ಮುಗಿದ ನಂತರ ಕ್ರೆಡಿಟ್/ಡೆಬಿಟ್ ಕಾರ್ಡ್ ಗ್ರಾಹಕರು ಹೆಚ್ಚು ಹಣ ತೆರಲು ಅಣಿಯಾಗಬೇಕಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಮುಂದಿನ ವರ್ಷದ ಜನವರಿಯಿಂದ ಹೊಸ ನಿಯಮ ಜಾರಿಗೊಳಿಸುತ್ತಿದೆ. ಶುಲ್ಕರಹಿತವಾಗಿ ಎಟಿಎಂನಿಂದ ತಿಂಗಳಿಗೆ ಇಂತಿಷ್ಟು ಬಾರಿ ಹಣ ಪಡೆಯಬೇಕು ಎಂಬ ನಿಯಮವಿದೆ. ಆದರೆ, ಈ ಅವಕಾಶ ಮುಗಿದ ಬಳಿಕ ಗ್ರಾಹಕರು ತಮ್ಮ ಅಕೌಂಟ್ ಹೊಂದಿರುವ ಬ್ಯಾಂಕ್‌ನ ಎಟಿಎಂಗಳಲ್ಲಿ ಪ್ರತಿ ವಹಿವಾಟಿಗೆ 21 ರೂಪಾಯಿ ಪಾವತಿಸಬೇಕು.
ಸದ್ಯ ಬ್ಯಾಂಕ್ ಗ್ರಾಹಕರು ತಮ್ಮ ಅಕೌಂಟ್ ಹೊಂದಿರುವ ಬ್ಯಾಂಕ್‌ಗಳಲ್ಲಿ ತಿಂಗಳಿಗೆ 5 ಬಾರಿ ಉಚಿತವಾಗಿ ಎಟಿಎಂ ವಹಿವಾಟು ಮಾಡಬಹುದು. ಮೆಟ್ರೋ ನಗರಗಳಲ್ಲಿ ಅಕೌಂಟ್ ಹೊಂದಿರದ ಬ್ಯಾಂಕ್‌ಗಳ ಎಟಿಎಂನಿಂದ 3 ಬಾರಿ ಮತ್ತು ಮೆಟ್ರೋ ಅಲ್ಲದ ನಗರಗಳಲ್ಲಿ 5 ಬಾರಿ ಉಚಿತ ವಹಿವಾಟು ಮಾಡಬಹುದು.
ಈ ಮೊದಲೇ ಆರ್‌ಬಿಐ ಈ ವರ್ಷದ ಜೂನ್‌ನಲ್ಲಿ ಎಟಿಎಂ ವಹಿವಾಟುಗಳ ನಿಯಮ ಬದಲಾವಣೆ ಮಾಡುವುದಾಗಿ ಸೂಚನೆ ನೀಡಿತ್ತು. ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಹೊಸ ಸೂಚನೆಯೊಂದಿಗೆ ತಮ್ಮ ವೆಬ್‌ಸೈಟ್ ಅನ್ನು ನವೀಕರಿಸಿವೆ.
ಏಳು ವರ್ಷಗಳ ಅಂತರದ ನಂತರ (ಆಗಸ್ಟ್ 2012) ಆಗಸ್ಟ್ 2021ರಲ್ಲಿ ಆರ್‌ಬಿಐ ವಹಿವಾಟಿನ ಮಿತಿ ಹೆಚ್ಚಿಸಿದೆ. ಆಗಸ್ಟ್ 2014ರಲ್ಲಿ ಗ್ರಾಹಕರು ಪಾವತಿಸಬೇಕಾದ ಶುಲ್ಕವನ್ನು ಕೊನೆಯದಾಗಿ ಪರಿಷ್ಕರಿಸಲಾಯಿತು.