ಅಕೋಲಾ (ಮಹಾರಾಷ್ಟ್ರ): ಇಲ್ಲಿಯ ಪಾರಸ್‌ನಲ್ಲಿ ಟಿನ್ ಶೆಡ್ ಮೇಲೆ ಹಳೆಯ ಮರ ಬಿದ್ದು ಏಳು ಜನರು ಮೃತಪಟ್ಟು ಮತ್ತು 30 ಜನರು ಗಾಯಗೊಂಡಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ. ಧಾರ್ಮಿಕ ಸಮಾರಂಭಕ್ಕೆಂದು ಬಂದಿದ್ದ ಭಕ್ತರು ಶೆಡ್ವೊಂದರಲ್ಲಿ ಜಮಾಯಿಸಿದ್ದರು. ಈ ವೇಳೆ ಹಳೆಯ ಮರವೊಂದು ಸುಮಾರು 40 ಜನರು ಇದ್ದಂತಹ ಶೆಡ್ ಮೇಲೆ ಬಿದ್ದು, ಈ ದುರ್ಘಟನೆ ಸಂಭವಿಸಿದೆ.
ಘಟನೆ ಬಗ್ಗೆ ಅಕೋಲಾ ಜಿಲ್ಲಾಧಿಕಾರಿ ನಿಮಾ ಅರೋರಾ ಮಾಹಿತಿ ನೀಡಿದ್ದು, ಧಾರ್ಮಿಕ ಸಮಾರಂಭಕ್ಕೆಂದು ಶೆಡ್ವೊಂದರಲ್ಲಿ ಭಕ್ತರು ಒಂದೆಡೆ ಜಮಾಯಿಸಿದ್ದರು. ಘಟನೆ ಸಂಭವಿಸಿದ ವೇಳೆ ಸುಮಾರು 40 ಜನರು ಶೆಡ್ನಲ್ಲಿದ್ದರು. ಈ ಪೈಕಿ ಮರ ಬಿದ್ದು 36 ಜನರು ಗಾಯಗೊಂಡಿದ್ದಾರೆ. ಕೂಡಲೇ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದರಲ್ಲಿ ಮೊದಲಗೆ ನಾಲ್ವರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರೆ, ನಂತರ ಮತ್ತೆ ಮೂವರು ಅಸುನೀಗಿದ್ದಾರೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. ಮತ್ತೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಿದರು.
ಡಿಸಿಎಂ ಫಡ್ನವೀಸ್ ಸಂತಾಪ.. ಘಟನೆಯ ಬಗ್ಗೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಫಡ್ನವೀಸ್, ಅಕೋಲಾ ಜಿಲ್ಲೆಯ ಪಾರಸ್‌ನಲ್ಲಿ ಧಾರ್ಮಿಕ ಸಮಾರಂಭಕ್ಕೆ ಕೆಲವರು ಸೇರಿದ್ದ ವೇಳೆ ಟಿನ್ ಶೆಡ್‌ನ ಮೇಲೆ ಮರ ಬಿದ್ದು ಕೆಲವು ಭಕ್ತರು ಸಾವನ್ನಪ್ಪಿರುವ ವರದಿ ನೋವಿನ ಸಂಗತಿಯಾಗಿದೆ. ಮೃತರಿಗೆ ನನ್ನ ನಮ್ರ ನಮನಗಳನ್ನು ಸಲ್ಲಿಸುತ್ತೇನೆ. ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಘಟನೆ ಸಂಭವಿಸಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳಿಗೆ ಆಸ್ಪತ್ರೆಗೆ ದಾಖಲಿಸಿ ಸಕಾಲದಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನು ಮಾಡಿದ್ದಾರೆ ಎಂದು aವರು ತಿಳಿಸಿದ್ದಾರೆ.
ನಾವು ಗಾಯಾಳು ಮತ್ತು ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಫಡ್ನವೀಸ್ ಅವರು ಹೇಳಿದರು. ಗಾಯಾಳುಗಳ ಚಿಕಿತ್ಸೆಯ ಬಗ್ಗೆ ಮಾತನಾಡಿದ ಡಿಸಿಎಂ ಫಡ್ನವೀಸ್, ಕೆಲವು ಗಾಯಾಳುಗಳನ್ನು ಜಿಲ್ಲಾ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಸಣ್ಣ ಪುಟ್ಟ ಗಾಯ ಆದವರಿಗೆ ಬಾಲಾಪುರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಮೃತರ ಕುಟುಂಬಗಳಿಗೆ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಆರ್ಥಿಕ ನೆರವು ನೀಡಲು ಮುಖ್ಯಮಂತ್ರಿ ಏಕನಾಥ್ ಶಿಂಧೆ ನಿರ್ಧರಿಸಿದ್ದಾರೆ ಎಂದು ಅವರು ಇದೇ ಸಂದರ್ಭದಲ್ಲಿ ಮಾಹಿತಿಯನ್ನು ನೀಡಿದ್ದಾರೆ.
ಇದನ್ನೂ ಓದಿ: ಸರ್ಕಾರವನ್ನು ಟೀಕಿಸಿ ಹಾಡು: ಮುಂಬೈನಲ್ಲಿ ಇಬ್ಬರು ರ್ಯಾಪರ್ಗಳ ವಿರುದ್ಧ ಕೇಸು