ಬೊಕಾಖಾಟ್(ಅಸ್ಸೋಂ): ಪ್ರಪಂಚದಾದ್ಯಂತ ಇಂದು ವಿಶ್ವ ಖಡ್ಗಮೃಗಗಳ ದಿನಾಚರಣೆ ಆಚರಣೆ ಮಾಡಲಾಗುತ್ತಿದೆ. ಇದರ ಮಧ್ಯೆ ಅಸ್ಸೋಂ ಮುಖ್ಯಮಂತ್ರಿ ಹೇಮಂತ್ ಬಿಸ್ವಾ ಶರ್ಮಾ ನೇತೃತ್ವದ ಸರ್ಕಾರ ಈ ಹಿಂದೆ ಕೈಗೊಂಡಿರುವ ನಿರ್ಧಾರದ ಪ್ರಕಾರ ಬರೋಬ್ಬರಿ 2,479 ಖಡ್ಗಮೃಗಗಳ ಕೊಂಬು ಸುಟ್ಟು ಹಾಕಿದೆ. 1970ರಿಂದ ಈವರೆಗೆ ಸಂರಕ್ಷಣೆ ಮಾಡಲಾಗಿರುವ ಸಾವಿರಾರು ಖಡ್ಗಮೃಗಗಳ ಕೊಂಬು ಇಂದು ಬೆಂಕಿಗಾಹುತಿಯಾಗಿವೆ.
ಯಾವ ಕಾರಣಕ್ಕಾಗಿ ಈ ನಿರ್ಧಾರ?
ಬೇಟೆಗಾರರು, ಕಳ್ಳಸಾಗಾಣಿಕೆದಾರರಿಂದ ಇವುಗಳನ್ನ ವಶಕ್ಕೆ ಪಡೆದುಕೊಂಡಿರುವ ಅಸ್ಸೋಂ ಸರ್ಕಾರ, ಖಡ್ಗಮೃಗಗಳ ಸಂರಕ್ಷಣೆ ಖಾತರಿಪಡಿಸುವ ಉದ್ದೇಶದಿಂದ ಅದರ ದೇಹದ ಯಾವುದೇ ಭಾಗ ಮಾರಾಟ ನಿಷೇಧ ಮಾಡಿದೆ. ಹೀಗಾಗಿ, ಅವುಗಳನ್ನ ಬೆಂಕಿ ಹಚ್ಚಿ ನಾಶ ಪಡಿಸಲಾಗಿದೆ.
ಅಸ್ಸೋಂನ ಬೊಕಾಖಾಟ್ನ ಕಾಜಿರಂಗ ರಾಷ್ಟ್ರೀಯ ಪಾರ್ಕ್ನಲ್ಲಿ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ 2,479 ಕೊಂಬುಗಳಿಗೆ ಬೆಂಕಿ ಹಚ್ಚಲಾಗಿದೆ. ಅಳಿವಿನಂಚಿನಲ್ಲಿರುವ ಪ್ರಾಣಿಗಳ ಪೈಕಿ ಖಡ್ಗಮೃಗ ಕೂಡ ಒಂದಾಗಿದೆ.
ಅಸ್ಸೋಂನ ಕಾಡು ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇವು ಕಂಡು ಬರುತ್ತವೆ. ಈ ಹಿಂದೆ ಕಳ್ಳಸಾಗಾಣಿಕೆದಾರರಿಂದ ವಶಕ್ಕೆ ಪಡೆದ ಕೊಂಬು ಹರಾಜು ಹಾಕಲಾಗುತ್ತಿತ್ತು. ಆದರೆ, ಇದೀಗ ಅದಕ್ಕೆ ವನ್ಯಜೀವಿ ಕಾಯ್ದೆ ಪ್ರಕಾರ ಬ್ರೇಕ್ ಹಾಕಲಾಗಿದೆ.
ಇದನ್ನೂ ಓದಿರಿ: ಬೆಂಗಳೂರಲ್ಲಿ ಕ್ಯಾಬ್ ಚಾಲಕನಿಂದ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ?
1979ರಿಂದ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಸಂಗ್ರಹ ಮಾಡಲಾಗಿದ್ದ ಖಡ್ಗಮೃಗಗಳ ಕೊಂಬು ಇವಾಗಿವೆ. ಇದು ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ವಿವಿಧ ಸಹೋದ್ಯೋಗಿಗಳು ಉಪಸ್ಥಿತರಿದ್ದರು.