ಅಮರಾವತಿ: ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಅಚಲಪುರ ತಾಲೂಕಿನಲ್ಲೊಂದು ವಿಶಿಷ್ಟ ಬಾವಿಯಿದೆ. ಈ ತಾಲೂಕಿನ ಶ್ರೀ ಕ್ಷೇತ್ರ ಅಷ್ಟಮಸಿದ್ಧಿಯಲ್ಲಿರುವ ಚಿಕ್ಕ ಬಾವಿಯೊಂದರ ನೀರಿನಲ್ಲಿ ಶಿಶುಗಳಿಗೆ ಸ್ನಾನ ಮಾಡಿಸಿದರೆ ಶಿಶುಗಳಿಗೆ ಅನೇಕ ರೋಗಗಳು ಬರುವುದಿಲ್ಲ ಎಂಬ ನಂಬಿಕೆ ಇದೆ. ಇದರಿಂದಾಗಿ ಈ ಬಾವಿಯಲ್ಲಿ ಶಿಶುಗಳಿಗೆ ಸ್ನಾನ ಮಾಡಿಸಲು ಜನ ಬರುತ್ತಲೇ ಇರುತ್ತಾರೆ. ಮಕ್ಕಳೊಂದಿಗೆ ಎಲ್ಲರೂ ಈ ಬಾವಿಯ ನೀರಿನಲ್ಲಿ ಸ್ನಾನ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದಾಗುತ್ತದೆ ಎಂಬ ಕಾರಣಕ್ಕೆ ಅಮರಾವತಿ ಜಿಲ್ಲೆ ಮಾತ್ರವಲ್ಲದೇ ವಿದರ್ಭದ ಬಹುತೇಕ ಎಲ್ಲ ಜಿಲ್ಲೆಗಳಿಂದ ಜನ ಈ ಬಾವಿಯ ನೀರಿನಲ್ಲಿ ಸ್ನಾನ ಮಾಡಲು ನಿತ್ಯವೂ ಆಗಮಿಸುತ್ತಾರೆ.
ಅದರಲ್ಲೂ ಮಂಗಳವಾರ ಮತ್ತು ಶುಕ್ರವಾರ ಅತಿ ಹೆಚ್ಚು ಜನಸಂದಣಿ ಇಲ್ಲಿರುತ್ತದೆ. ಅಷ್ಟಮಸಿದ್ಧಿಯ ಬಾವಿಯ ನೀರಿನಲ್ಲಿ ಮಂಗಳವಾರ ಮತ್ತು ಶುಕ್ರವಾರದಂದು ಸ್ನಾನ ಮಾಡುವುದರಿಂದ ಹೆಚ್ಚಿನ ಪ್ರಯೋಜನವಾಗುತ್ತದೆ ಎಂದು ಜನ ನಂಬಿರುವುದರಿಂದ ಈ ಎರಡು ದಿನ ಜನತೆ ತಂಡೋಪತಂಡವಾಗಿ ಆಗಮಿಸುತ್ತಾರೆ.
ವೀಳ್ಯದೆಲೆ ಕರ್ಪೂರ ಸುಡುವ ಸಂಪ್ರದಾಯ:ಅಷ್ಟಮಸಿದ್ಧಿಗೆ ಬರುವ ಜನರಿಗೆ ಕಡಿಮೆ ದರದಲ್ಲಿ ಬಾವಿಯಿಂದ ನೀರು ಸೇದಲು ಹಗ್ಗ, ಬಕೆಟ್ ಗಳನ್ನು ಬಾಡಿಗೆಗೆ ನೀಡುವುದು ಇಲ್ಲಿನ ಸಂಪ್ರದಾಯ. ಪುಟ್ಟ ಶಿಶುಗಳಿಗೆ ಸ್ನಾನ ಮಾಡಿಸಲು ಮೊದಲ ಬಾರಿಗೆ ಬಾವಿಯಿಂದ ನೀರು ಸೇದುವಾಗ ಕರ್ಪೂರವನ್ನು ಬಕೆಟ್‌ನಲ್ಲಿ ವೀಳ್ಯದೆಲೆಯಿಂದ ಸುಟ್ಟು, ಕರ್ಪೂರ ಉರಿಯುತ್ತಿರುವಾಗ ಬಕೆಟ್ ಅನ್ನು ಹಗ್ಗದ ಸಹಾಯದಿಂದ ಬಾವಿಯ ನೀರಿಗೆ ಬೀಳಿಸುತ್ತಾರೆ. ಇದರ ನಂತರ, ಈ ಬಕೆಟ್‌ನಿಂದ ನೀರನ್ನು ಸೇದಿ ಈ ನೀರನ್ನು ಶಿಶುಗಳ ದೇಹದ ಮೇಲೆ ಸುರಿಯಲಾಗುತ್ತದೆ. ಹಲವು ವರ್ಷಗಳಿಂದ ಇಲ್ಲಿ ಈ ಪದ್ಧತಿ ಜಾರಿಯಲ್ಲಿದೆ.
ಮಗು ಸದಾ ಕಿರಿಕಿರಿ ಮಾಡ್ತಿದ್ದರೆ ಇಲ್ಲೊಂದ್ಸಲ ಕರ್ಕೊಂಡೋಗಿ: ಸದಾ ಕಿರಿಕಿರಿ ಮಾಡುವ ಮತ್ತು ಅನಾರೋಗ್ಯದಿಂದ ಬಳಲುತ್ತಿರುವ ಶಿಶುಗಳಿಗೆ ಈ ಸ್ಥಳದಲ್ಲಿ ಮಂತ್ರ ಹೇಳಲಾಗುತ್ತದೆ. ಮಂತ್ರದ ಭಾಗವಾಗಿ ಈ ಸ್ಥಳದಲ್ಲಿ ಕುಂಬಳಕಾಯಿ ಹರಿ ಬಿಡಲಾಗುತ್ತದೆ. ಕುಂಬಳಕಾಯಿ ಹೊತ್ತೊಯ್ಯುವುದರಿಂದ ತಮ್ಮ ಮಕ್ಕಳು ಕೂಡ ಕುಂಬಳಕಾಯಿಯಂತೆ ಆರೋಗ್ಯವಾಗಿರುತ್ತವೆ ಎಂದು ಅನೇಕ ಭಕ್ತರು ನಂಬುತ್ತಾರೆ.
ಸಾಧಕರು ತಂಗಿದ್ದ ಕ್ಷೇತ್ರವಿದು: ಅಷ್ಟಮಹಾಸಿದ್ಧಿ ಅಥವಾ ಅಷ್ಟಮಸಿದ್ಧಿ ಎಂದರೆ ಮಹಾನುಭಾವ ಪಂಥೀಯರ ತೀರ್ಥಕ್ಷೇತ್ರ ಎಂದರ್ಥ. ಈ ಸ್ಥಳದಲ್ಲಿ ಚಕ್ರಧರ ಸ್ವಾಮಿ ಮತ್ತು ಗೋವಿಂದ ಪ್ರಭು ದೇವಾಲಯವಿದೆ. ಈ ಇಬ್ಬರೂ ಮಹಾತ್ಮರು ಮೂರು ದಿನಗಳ ಕಾಲ ಈ ಸ್ಥಳದಲ್ಲಿ ತಂಗಿದ್ದರು ಎಂದು ಹೇಳಲಾಗುತ್ತದೆ.
ಈ ಬಾವಿಯ ನೀರು ಏಕೆ ವಿಶಿಷ್ಟ?: ಅಷ್ಟಮಸಿದ್ಧಿಯಲ್ಲಿರುವ ಬಾವಿಯ ನೀರು ಔಷಧೀಯ ಗುಣಗಳನ್ನು ಹೊಂದಿದ್ದು, ಇಲ್ಲಿ ಸ್ನಾನ ಮಾಡುವುದರಿಂದ ಚರ್ಮ ಸಂಬಂಧಿ ರೋಗಗಳು ಬರುವುದಿಲ್ಲ ಎಂದು ನಂಬಲಾಗಿದೆ. ಭೌಗೋಳಿಕವಾಗಿ ಹೇಳುವುದಾದರೆ, ಅಷ್ಟಮಸಿದ್ಧಿ ಬಾವಿ ಇರುವ ಸ್ಥಳ ಸಂಪೂರ್ಣ ದಖನ್ ಪ್ರಸ್ಥಭೂಮಿಯಾಗಿದೆ ಮತ್ತು ಇದು ಲಾವಾ ಸ್ಫೋಟದಿಂದಾಗಿ ರೂಪುಗೊಂಡಿದೆ. ಲಾವಾರಸ ಸ್ಫೋಟದ ಸಮಯದಲ್ಲಿ ಅನೇಕ ಅನಿಲಗಳು ಹೊರಬಂದಿರುತ್ತವೆ.
ಇವುಗಳಲ್ಲಿ ಗಂಧಕದ ಹರಿವು ಅಂದರೆ ಗಂಧಕ ಅನಿಲವು ನೆಲದಿಂದ ಅಷ್ಟಮಸಿದ್ಧಿಯಲ್ಲಿ ಈ ಬಾವಿಗೆ ಬಂದಿದೆ. ಈ ಬಾವಿಯ ನೀರಿನಲ್ಲಿ ನಿರಂತರವಾಗಿ ಗಂಧಕ ಮಿಶ್ರಣವಾಗಿರುವುದರಿಂದ ಈ ನೀರಿನ ಬಣ್ಣ ಹಳದಿ ಬಣ್ಣಕ್ಕೆ ತಿರುಗಿದ್ದು, ನೀರು ನಿರಂತರವಾಗಿ ಬಿಸಿಯಾಗಿರುತ್ತದೆ ಎಂದು ಭೂಗೋಳ ತಜ್ಞ ಪ್ರೊ. ಡಾ. ಶುಭಾಂಗಿ ದೇಶಮುಖ 'ಈಟಿವಿ ಭಾರತ್'ಗೆ ತಿಳಿಸಿದರು. ಅಷ್ಟಮಸಿದ್ಧಿಯಲ್ಲಿರುವ ಬಾವಿಯ ಔಷಧೀಯ ಗುಣಗಳ ಬಗ್ಗೆಯೂ ಸಂಶೋಧನೆ ನಡೆಸುವುದು ಅಗತ್ಯ ಎಂದು ಪ್ರೊ. ಡಾ. ಶುಭಾಂಗಿ ದೇಶಮುಖ ಹೇಳಿದರು.
ಇದನ್ನು ಓದಿ: ಶ್ವಾಸಕೋಶದ ಕ್ಯಾನ್ಸರ್: ರೋಗ ಲಕ್ಷಣಗಳೇನು? ಪರಿಹಾರವೇನು? ಸಂಪೂರ್ಣ ವಿವರ