ನವದೆಹಲಿ/ಬೆಂಗಳೂರು: ಕರ್ನಾಟಕ ಹೈಕೋರ್ಟ್, ಜಮ್ಮು ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿ ಇಬ್ಬರು ನ್ಯಾಯಮೂರ್ತಿಗಳಿಗೆ ಬಡ್ತಿ ನೀಡುವಂತೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಜೊತೆಗೆ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳನ್ನು ರಾಜಸ್ಥಾನ ಹೈಕೋರ್ಟ್‌ಗೆ ವರ್ಗಾಯಿಸಲು ಸಹ ಅಧಿಸೂಚನೆ ಹೊರಡಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು, ಸಾಂವಿಧಾನಿಕ ನಿಬಂಧನೆಗಳ ಪ್ರಕಾರ, ನ್ಯಾಯಮೂರ್ತಿ ಪಂಕಜ್ ಮಿಥಾಲ್ ಅವರನ್ನು ರಾಜಸ್ಥಾನ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ರಾಜಸ್ಥಾನಕ್ಕೆ ವರ್ಗಾಯಿಸಲಾಗಿದೆ, ನ್ಯಾಯಮೂರ್ತಿ ಪಿ ಬಿ ವರಾಲೆ ಅವರನ್ನು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಮತ್ತು ನ್ಯಾಯಮೂರ್ತಿ ಎಎಂ ಮ್ಯಾಗ್ರೆ ಅವರನ್ನು ಜಮ್ಮು ಕಾಶ್ಮೀರ ಮತ್ತು ಲಡಾಖ್ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲಾಗಿದೆ. ನಾನು ಅವರೆಲ್ಲರಿಗೂ ಶುಭಾಶಯ ಕೋರುತ್ತೇನೆ ಎಂದು ಟ್ವೀಟ್ನಲ್ಲಿ ಬರೆದಿದ್ದಾರೆ.
ಸೆಪ್ಟೆಂಬರ್ 28 ರಂದು ನಡೆದ ಸುಪ್ರೀಂ ಕೋರ್ಟ್ ಕೊಲಿಜಿಯಂ ಸಭೆಯಲ್ಲಿ ಪ್ರಸ್ತುತ ಬಾಂಬೆ ಹೈಕೋರ್ಟ್ನಲ್ಲಿ ನ್ಯಾಯಮೂರ್ತಿ ಆಗಿರುವ ಪಿ.ಬಿ. ವರಾಲೆ ಅವರನ್ನು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯನ್ನಾಗಿ ಬಡ್ತಿ ನೀಡುವಂತೆ ಮತ್ತು ನ್ಯಾಯಮೂರ್ತಿ ಅಲಿ ಮೊಹಮ್ಮದ್ ಮ್ಯಾಗ್ರೆ ಅವರನ್ನು ಜಮ್ಮು ಕಾಶ್ಮೀರ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಿಸುವಂತೆ ಶಿಫಾರಸು ಮಾಡಲಾಗಿತ್ತು.
ಮತ್ತೊಂದು ಹೇಳಿಕೆಯಲ್ಲಿ, ನ್ಯಾಯಮೂರ್ತಿ ಪಂಕಜ್ ಮಿಥಾಲ್ ಅವರನ್ನು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನಿಂದ ರಾಜಸ್ಥಾನ ಹೈಕೋರ್ಟ್‌ಗೆ ವರ್ಗಾಯಿಸಲು ಕೊಲಿಜಿಯಂ ಶಿಫಾರಸು ಮಾಡಿದೆ.
ಇದನ್ನೂ ಓದಿ: ತಿರುಪತಿಗೆ ಸಿಜೆಐ ಉದಯ್ ಉಮೇಶ್ ಲಲಿತ್ ದಂಪತಿ ಭೇಟಿ: ಹನುಮಂತ ವಾಹನ ಸೇವೆಯಲ್ಲಿ ಭಾಗಿ