ಹೈದರಾಬಾದ್: ಕಳೆದ ವರ್ಷ ಅಕ್ಟೋಬರ್‌ನಲ್ಲಿ ತೆಲಂಗಾಣ ರಾಜಧಾನಿ ಹೈದರಾಬಾದ್‌ನಲ್ಲಿ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿದ ಆರೋಪದ ಮೇಲೆ ಬಂಧಿತರಾಗಿರುವ ಆರೋಪಿಗಳಾದ ಮೊಹಮ್ಮದ್ ಜಾಹೇದ್, ಮಾಜ್ ಹಸನ್ ಫಾರೂಕ್ ಮತ್ತು ಸಮಿಯುದ್ದೀನ್ ಇವರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಇವರ ವಿರುದ್ಧ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಿದೆ.
ಆರೋಪಿ ಜಾಹೇದ್, ಈತ ಪಾಕಿಸ್ತಾನ ಮೂಲದ ಹ್ಯಾಂಡ್ಲರ್‌ಗಳಿಂದ ಹ್ಯಾಂಡ್ ಗ್ರೆನೇಡ್‌ಗಳನ್ನು ಪಡೆದಿದ್ದಾನೆ ಮತ್ತು ಕೋಮು ಗಲಭೆ ಸೃಷ್ಟಿಸುವ ಸಲುವಾಗಿ ಈ ಗ್ರೆನೇಡ್‌ಗಳನ್ನು ಸಾರ್ವಜನಿಕ ಸಭೆಗಳು ಮತ್ತು ಮೆರವಣಿಗೆಗಳ ಮೇಲೆ ಎಸೆಯಲು ಸಂಚು ರೂಪಿಸುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಪಾಕಿಸ್ತಾನಿ ಸಂಚುಕೋರರ ಆಜ್ಞೆಯ ಮೇರೆಗೆ ಈ ಭಯೋತ್ಪಾದನಾ ಯೋಜನೆಗಳನ್ನು ಕೈಗೊಳ್ಳಲು ಜಾಹೇದ್ ಕೆಲ ಸದಸ್ಯರನ್ನು ಕೂಡ ನೇಮಿಸಿಕೊಂಡಿದ್ದ ಎಂದು ಎನ್ಐಎ ಮೂಲಗಳು ತಿಳಿಸಿವೆ.
ಪಾಕಿಸ್ತಾನಿ ಹ್ಯಾಂಡ್ಲರ್‌ಗಳ ಸೂಚನೆಯಂತೆ, ಜಾಹೇದ್ ತನ್ನ ಗ್ಯಾಂಗ್ ಸದಸ್ಯರೊಂದಿಗೆ ಹೈದರಾಬಾದ್ ನಗರದ ಹಲವಾರು ಕಡೆಗಳಲ್ಲಿ ಸ್ಫೋಟ ಮತ್ತು ಒಂಟಿಯಾಗಿ ದಾಳಿ ನಡೆಸುವ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ್ದ. ಸಾರ್ವಜನಿಕರಲ್ಲಿ ಹೆದರಿಕೆ ಹುಟ್ಟಿಸಲು ಈ ಭಯೋತ್ಪಾದನಾ ಕೃತ್ಯಗಳ ಸಂಚು ರೂಪಿಸಲಾಗಿತ್ತು. ಜಾಹೇದ್‌ಗೆ ಸೂಚನೆಗಳನ್ನು ನೀಡುತ್ತಿದ್ದ ಪಾಕಿಸ್ತಾನಿ ಹ್ಯಾಂಡ್ಲರ್‌ಗಳು ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಮತ್ತು ಇಂಟರ್ ಸರ್ವಿಸಸ್ ಇಂಟೆಲಿಜೆನ್ಸ್ (ಐಎಸ್‌ಐ) ದಂತಹ ಸಂಘಟನೆಗಳಿಗೆ ಸೇರಿದ್ದಾರೆ. ಹೈದರಾಬಾದ್‌ನಲ್ಲಿ ಭಯೋತ್ಪಾದನಾ ದಾಳಿಯ ಸಂಚಿಗೆ ಸಂಬಂಧಿಸಿದಂತೆ ಹೈದರಾಬಾದ್‌ನ ಕೇಂದ್ರ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಳಿ ಬೆದರಿಕೆ: ಮುಂಬೈನಲ್ಲಿ ಭಯೋತ್ಪಾದಕ ದಾಳಿ ನಡೆಸುವುದಾಗಿ ತಾಲಿಬಾನ್ ಸದಸ್ಯ ಎಂದು ಹೇಳಿಕೊಂಡ ಅಪರಿಚಿತ ವ್ಯಕ್ತಿಯೊಬ್ಬನಿಂದ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಮೇಲ್ ಬಂದಿದೆ ಎಂದು ಪೊಲೀಸ್ ಮೂಲಗಳು ಶುಕ್ರವಾರ ತಿಳಿಸಿವೆ. ಮೂಲಗಳ ಪ್ರಕಾರ, ಮಹಾರಾಷ್ಟ್ರದ ವಿವಿಧ ನಗರಗಳಲ್ಲಿ ಕಟ್ಟೆಚ್ಚರ ವಹಿಸುವ ಕುರಿತು ಎನ್‌ಐಎ ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದೆ. ಬೆದರಿಕೆ ಮೇಲ್ ಕಳುಹಿಸಿದ ವ್ಯಕ್ತಿ ತನ್ನನ್ನು ತಾನು ತಾಲಿಬಾನಿ ಎಂದು ಹೇಳಿಕೊಂಡಿದ್ದಾನೆ. ಮುಂಬೈನಲ್ಲಿ ಭಯೋತ್ಪಾದಕ ದಾಳಿ ನಡೆಯಲಿದೆ ಎಂದು ಆತ ಹೇಳಿದ್ದಾನೆ ಎಂದು ಮುಂಬೈ ಪೊಲೀಸ್ ಮೂಲಗಳು ತಿಳಿಸಿವೆ.
ಬೆದರಿಕೆ ಮೇಲ್ ಬಂದ ನಂತರ, ಇದರ ಹಿಂದಿನ ಸತ್ಯಾಸತ್ಯತೆ ಅರಿಯುವ ಸಲುವಾಗಿ ಎನ್‌ಐಎ ಮುಂಬೈ ಪೊಲೀಸರೊಂದಿಗೆ ಸೇರಿಕೊಂಡು ಜಂಟಿ ತನಿಖೆ ಪ್ರಾರಂಭಿಸಿದೆ. ಈ ವರ್ಷದ ಜನವರಿಯಲ್ಲಿ ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ಗೆ ಬೆದರಿಕೆ ಕರೆ ಬಂದಿತ್ತು. ಕರೆ ಮಾಡಿದ ಅಪರಿಚಿತರು ಶಾಲೆಯನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದರು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಗರದ ವಿವಿಧೆಡೆ ಬಾಂಬ್‌ಗಳನ್ನು ಇರಿಸಿರುವುದಾಗಿ ಹೇಳಿದ ಇದೇ ರೀತಿಯ ಕರೆ ಬಂದಿತ್ತು.
ಪೊಲೀಸರ ಪ್ರಕಾರ ಇನ್ಫಿನಿಟಿ ಮಾಲ್ ಅಂಧೇರಿ, ಪಿವಿಆರ್ ಮಾಲ್ ಜುಹು ಮತ್ತು ಸಹಾರಾ ಹೋಟೆಲ್ ಏರ್‌ಪೋರ್ಟ್ ಸೇರಿ ನಗರದಲ್ಲಿ ಮೂರು ಕಡೆ ಬಾಂಬ್‌ಗಳನ್ನು ಇರಿಸಲಾಗಿದೆ ಎಂದು ಕರೆ ಮಾಡಿ ಬೆದರಿಕೆ ಹಾಕಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಶಿವಮೊಗ್ಗ ಸ್ಫೋಟ ಪ್ರಕರಣ: 6 ಕಡೆ ಎನ್ಐಎ ದಾಳಿ, ಇಬ್ಬರು ಐಸಿಸ್ ಸಕ್ರಿಯ ಸದಸ್ಯರ ಬಂಧನ