ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ನುಸುಳಲು ಸುಮಾರು 140 ಉಗ್ರರು ನಿಯಂತ್ರಣ ರೇಖೆಯಲ್ಲಿ ಕಾಯುತ್ತಿದ್ದಾರೆಂದು ಹಿರಿಯ ಭದ್ರತಾ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಫೆಬ್ರವರಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಒಪ್ಪಂದದ ಹೊರತಾಗಿಯೂ ಗಡಿ ನಿಯಂತ್ರಣ ರೇಖೆಯಲ್ಲಿ ಭಯೋತ್ಪಾದಕರಿಗೆ ಮೂಲಭೂತ ಸೌಕರ್ಯಗಳು ಇನ್ನೂ ಹಾಗೇ ಇವೆ ಎಂದು ಅವರು ತಿಳಿಸಿದ್ದಾರೆ.
ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) 'ಗ್ರೇ' ಪಟ್ಟಿಯಿಂದ ಹೊರಬರಲು ಕದನ ವಿರಾಮಕ್ಕೆ ಪಾಕ್‌ನ ಬದ್ಧತೆಯೇ ಹೆಚ್ಚಿನ ಆದ್ಯತೆಯಾಗಿದೆ ಎಂದು ಅಧಿಕಾರಿ ಹೇಳಿದರು. ಭಯೋತ್ಪಾದಕರಿಗೆ ಮೂಲಸೌಕರ್ಯ ತೆಗೆದುಹಾಕಿದರೆ ಈ ವಿಷಯದಲ್ಲಿ ಪಾಕಿಸ್ತಾನದ ಬದ್ಧತೆ ಸಾಬೀತಾಗುತ್ತದೆ ಎಂದಿದ್ದಾರೆ.
ಭಾರತದ ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ನಲ್ಲಿ ಸುಮಾರು 140 ಉಗ್ರರು ಕಾಯುತ್ತಿದ್ದಾರೆ. ಆದಾಗ್ಯೂ, ಗಡಿಯಲ್ಲಿ ಭಾರೀ ಭದ್ರತೆಯಿಂದಾಗಿ ಅವರು ಆ ಅವಕಾಶವನ್ನು ಕಳೆದುಕೊಂಡಿದ್ದಾರೆ. ನಮ್ಮ ಸೈನಿಕರು ಹಿಂದೆ ಇಂತಹ ಅನೇಕ ಕೃತ್ಯಗಳನ್ನು ಹಿಮ್ಮೆಟ್ಟಿಸಿದ್ದಾರೆ. ಇದೇ ರೀತಿಯ ಕೃತ್ಯಗಳಿಗೆ ಯತ್ನಿಸುತ್ತಿದ್ದಾರೆಂದು ಹಿರಿಯ ಭದ್ರತಾ ಅಧಿಕಾರಿ ತಿಳಿಸಿದ್ದಾರೆ.
ಪಾಕಿಸ್ತಾನ ಕದನ ವಿರಾಮ ಒಪ್ಪಂದವನ್ನು ಸಮರ್ಥಿಸಲು ಮತ್ತು ಗಡಿ ನಿಯಂತ್ರಣ ರೇಖೆಯಲ್ಲಿ ಉಗ್ರರಿಗೆ ಮೂಲಸೌಕರ್ಯ ಹೆಚ್ಚಿಸಲು ಪ್ರಯತ್ನಿಸುತ್ತಿದೆ ಎಂದು ಅಧಿಕಾರಿ ಎಚ್ಚರಿಸಿದ್ದಾರೆ. ಎರಡು ವರ್ಷಗಳ ಹಿಂದೆ ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ್ದರಿಂದ ವಿದೇಶಿ ಉಗ್ರರು ಕಣ್ಮರೆಯಾಗಿದ್ದಾರೆಂದು ಅವರು ಹೇಳಿದರು.
ರಹಸ್ಯ ಸ್ಥಳಗಳಲ್ಲಿ ಅವರು ಅಡಗಿರುವುದಾಗಿ ಹೇಳಿಕೊಂಡಿದ್ದಾರೆ. ಉಗ್ರರ ಜೊತೆ ಕೈಜೋಡಿಸದಂತೆ ಸ್ಥಳೀಯರ ಮಾನಸಿಕ ಸ್ಥಿತಿಯನ್ನು ಬದಲಿಸಲು ಸೇನೆ ಕ್ರಮಗಳನ್ನು ಕೈಗೊಳ್ಳುತ್ತಿದೆ. ಗಡಿ ನಿಯಂತ್ರಣ ರೇಖೆಯಲ್ಲಿ ಶಾಂತಿ ಸ್ಥಾಪಿಸಲು ಭಾರತ ಮತ್ತು ಪಾಕಿಸ್ತಾನ ಫೆಬ್ರವರಿಯಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಂಡಿದೆ. ಕದನ ವಿರಾಮ ಒಪ್ಪಂದಕ್ಕೆ ಬದ್ಧರಿರಲು ನಿರ್ಧರಿಸಲಾಗಿದೆ. ಉಭಯ ದೇಶಗಳ ಸಶಸ್ತ್ರ ಪಡೆಗಳ ಮಹಾನಿರ್ದೇಶಕರು ಈಗಾಗಲೇ ಚರ್ಚೆಗಳಲ್ಲಿ ಒಮ್ಮತಕ್ಕೆ ಬಂದಿದ್ದಾರೆ.