ಉತ್ತರಾಖಂಡ: ಅತ್ಯಾಚಾರ ಭಾರತದ ದೊಡ್ಡ ಪಿಡುಗೆಂದೇ ಹೇಳಬಹುದು. ಭಾತದಲ್ಲಿ ಅದೆಷ್ಟೇ ಕಾನೂನುಗಳನ್ನು ಜಾರಿಗೆ ತಂದರೂ ಸಹ ವಿಕೃತ ಕಾಮಿಗಳು ತಮ್ಮ ವರಸೆ ಮುಂದುವರೆಸುತ್ತಲೇ ಬಂದಿದ್ದಾರೆ. ಇನ್ನು ಉತ್ತರಾಖಂಡದಲ್ಲಿ 19 ವರ್ಷಗಳಲ್ಲಿ 4 ಸಾವಿರಕ್ಕೂ ಹೆಚ್ಚು ಮಹಿಳೆಯರು ಅತ್ಯಾಚಾರಕ್ಕೊಳಗಾಗಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ.
ಕಳೆದ 19 ವರ್ಷಗಳಲ್ಲಿ ರಾಜ್ಯದಲ್ಲಿ 3956 ಮಹಿಳೆಯರ ಮೇಲೆ ಅತ್ಯಾಚಾರ ನಡೆಸಲಾಗಿದ್ದು, ಇದರಲ್ಲಿ 19 ಆಸಿಡ್ ದಾಳಿ ಪ್ರಕರಣಗಳು ಸಹ ಸೇರಿವೆ.
ಮಾಹಿತಿ ಹಕ್ಕು ಕಾಯ್ದೆಯಡಿ ಹಲ್ದ್ವಾನಿ ನಿವಾಸಿ ಹೇಮಂತ್ ಗೊನಿಯಾ ಅವರು ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ ಅವರಲ್ಲಿ ಕೋರಿದ ಮಾಹಿತಿ ಪ್ರಕಾರ ಈ ಪ್ರಕರಣಗಳ ಸಂಖ್ಯೆ ಹೊರಬಿದ್ದಿದೆ.
ಅತ್ಯಾಚಾರಕ್ಕೊಳಗಾದವರಿಗೆ ಈವರೆಗೆ ಹಣಕಾಸಿನ ನೆರವಾಗಿ 4 ಕೋಟಿ 81 ಲಕ್ಷದ 80 ಸಾವಿರ ರೂಪಾಯಿಗಳನ್ನು ಖರ್ಚು ಮಾಡಲಾಗಿದೆಯಂತೆ. ಹಾಗೆಯೇ ಆ್ಯಸಿಡ್ ದಾಳಿ ಸಂತ್ರಸ್ತರಿಗೆ 17 ಲಕ್ಷ 90 ಸಾವಿರ ರೂ. ವೆಚ್ಚ ಮಾಡಲಾಗಿದೆ.
ಉತ್ತರಾಖಂಡದ ದೇವ್ಭೂಮಿ ಬಯಲು ಪ್ರದೇಶಗಳಲ್ಲಿ ಇಂಥಹ ಅಪರಾಧದ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಘಟನೆಗಳನ್ನು ತಡೆಗಟ್ಟಲು ಸರ್ಕಾರವು ಯಾವುದೇ ದೃಢವಾದ ಕಾನೂನನ್ನು ಜಾರಿಗೆ ತರುತ್ತಿಲ್ಲ ಎಂದು ಆರ್ಟಿಐ ಕಾರ್ಯಕರ್ತ ಹೇಮಂತ್ ಹೇಳಿದ್ದಾರೆ.