ನವದೆಹಲಿ: ಗಣರಾಜ್ಯೋತ್ಸವ ಮತ್ತು ಸೇನಾ ದಿನದ ಮೆರವಣಿಗೆಯಲ್ಲಿ ಭಾಗವಹಿಸಲು ಕಳೆದ ಕೆಲವು ವಾರಗಳಲ್ಲಿ ವಿವಿಧ ಸ್ಥಳಗಳಿಂದ ರಾಷ್ಟ್ರ ರಾಜಧಾನಿಗೆ ಆಗಮಿಸಿದ ಸುಮಾರು 150 ಸೇನಾ ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಕೋವಿಡ್ ಸೋಂಕಿನ ಭೀತಿಯಿಂದಾಗಿ ಎರಡು ಪರೇಡ್ಗಳಲ್ಲಿ ಭಾಗವಹಿಸುವ ಎಲ್ಲ ಸಿಬ್ಬಂದಿಗೆ ಕಡ್ಡಾಯವಾಗಿ ಕೊರೊನಾ ಟೆಸ್ಟ್ ಮಾಡಲಾಗುತ್ತಿದೆ. ಹೀಗೆ ನಡೆಸಿದ ಪರೀಕ್ಷೆಯಲ್ಲಿ 150 ಸೇನಾ ಸಿಬ್ಬಂದಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ.
ಗಣರಾಜ್ಯೋತ್ಸವ ಮತ್ತು ಸೇನಾ ದಿನದ ಪರೇಡ್ಗಾಗಿ ವಿವಿಧ ಸಾರಿಗೆ ಮೂಲಕ ನವೆಂಬರ್ ಅಂತ್ಯದಿಂದ 2 ಸಾವಿರಕ್ಕೂ ಹೆಚ್ಚು ಸೇನಾ ಸಿಬ್ಬಂದಿ ದೆಹಲಿಗೆ ಆಗಮಿಸಿದ್ದಾರೆ. ಅವರೆಲ್ಲರೂ "ಬಯೋ ಬಬಲ್" ಪ್ರವೇಶಿಸುವ ಮೊದಲು ಕೋವಿಡ್ ಪರೀಕ್ಷೆಗೆ ಒಳಗಾಗಬೇಕಾಯಿತು ಎಂದು ಮೂಲಗಳು ತಿಳಿಸಿವೆ.
ಸೋಂಕು ಪತ್ತೆಯಾಗದೇ ಇರುವವರನ್ನು "ಸುರಕ್ಷಿತ ಗುಳ್ಳೆ"ಗೆ ಸೇರಿಸಲಾಗುತ್ತಿದ್ದು, ಪರೇಡ್ನ ಭಾಗವಾಗಿರುವ ಎಲ್ಲ ಸಿಬ್ಬಂದಿಗೆ ಅವಕಾಶ ಕಲ್ಪಿಸಲು ಇದನ್ನು ರಚಿಸಲಾಗಿದೆ.
ಕಂಟೋನ್ಮೆಂಟ್ ಪ್ರದೇಶದಲ್ಲಿ ರಚಿಸಲಾದ "ಸುರಕ್ಷಿತ ಗುಳ್ಳೆ" ಹೆಚ್ಚಿನ ಸಂಖ್ಯೆಯ ಕ್ಯಾಂಪ್ಗಳನ್ನು ಒಳಗೊಂಡಿದೆ. ಅವುಗಳಲ್ಲಿ ಉಳಿಯಲು ಆಯ್ಕೆಯಾದವರು ಜನವರಿ 26 ರ ಗಣರಾಜ್ಯೋತ್ಸವದವರೆಗೆ ಹೊರಗಿನ ಪ್ರಪಂಚದಿಂದ ಬಹುತೇಕ ಶೂನ್ಯ ಸಂಪರ್ಕವನ್ನು ಹೊಂದಿರುತ್ತಾರೆ ಎಂದು ಮೂಲಗಳು ತಿಳಿಸಿವೆ.