ಮುಂಬೈ: ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿಯ ಬಂಧನವನ್ನು ಖಂಡಿಸಿರುವ ಬಿಜೆಪಿ ಇದು 'ಕರಾಳ ದಿನ' ಮತ್ತು 'ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿ' ಎಂದು ಹೇಳಿತ್ತು. ಬಿಜೆಪಿಯ ಈ ಹೇಳಿಕೆ ವಿರುದ್ಧ ಶಿವಸೇನೆ ಕಿಡಿಕಾರಿದೆ.
ಗೋಸ್ವಾಮಿ ಬಂಧನದಿಂದಾಗಿ ಮಹಾರಾಷ್ಟ್ರದಲ್ಲಿ 'ತುರ್ತು ಪರಿಸ್ಥಿತಿ'ಯಂತಹ ಸಂದರ್ಭ ಉಂಟಾಗಿದೆ ಎಂಬ ಬಿಜೆಪಿಯ ರಾಜ್ಯ ನಾಯಕರು ಹಾಗೂ ಕೇಂದ್ರ ಸಚಿವರು ಹೇಳುತ್ತಿರುವುದು ಆಶ್ಚರ್ಯಕರವಾಗಿದೆ ಎಂದು ಶಿವಸೇನೆ ತನ್ನ ಮುಖವಾಣಿ 'ಸಾಮ್ನಾ'ದಲ್ಲಿ ಬರೆದುಕೊಂಡಿದೆ.
ಹಿಂದಿನ ರಾಜ್ಯ ಸರ್ಕಾರವು ಗೋಸ್ವಾಮಿಯನ್ನು ಕಾಪಾಡಲು 2018ರ ಅನ್ವಯ್ ನಾಯಕ್ರ ಆತ್ಮಹತ್ಯೆ ಪ್ರಕರಣವನ್ನು ಮುಚ್ಚಿಹಾಕಿತ್ತು ಎಂದು ಕೂಡ ಸಾಮ್ನಾದಲ್ಲಿ ಆರೋಪಿಸಲಾಗಿದೆ. ರಾಜ್ಯ ಸರ್ಕಾರದ ವಿರುದ್ಧ ಬರೆದಿದ್ದಕ್ಕೆ ಗುಜರಾತ್ನಲ್ಲಿ ಪತ್ರಕರ್ತನನ್ನು ಅರೆಸ್ಟ್ ಮಾಡಲಾಗಿತ್ತು, ಉತ್ತರ ಪ್ರದೇಶದಲ್ಲಿ ಜರ್ನಲಿಸ್ಟ್ ಒಬ್ಬರನ್ನು ಕೊಲೆ ಮಾಡಲಾಗಿದೆ. ಈ ಘಟನೆಗಳನ್ನ ಯಾರೂ ತುರ್ತು ಪರಿಸ್ಥಿತಿ ಎಂದು ಕರೆದಿರಲಿಲ್ಲ. ಬಿಜೆಪಿಯವರು ಮಣ್ಣಿನ ಮಗ ಅನ್ವಯ್ ನಾಯಕ್ ಸಾವಿಗೆ ನ್ಯಾಯ ಒದಗಿಸಬೇಕೇ ಹೊರತು ಅರ್ನಬ್ಗೆ ಬೆಂಬಲಿಸುವುದಲ್ಲ. ಕಾನೂನಿನ ಮುಂದೆ ಪ್ರಧಾನಿ ಸೇರಿ ಎಲ್ಲರೂ ಸಮಾನರು ಎಂದು ಬರೆಯಲಾಗಿದೆ.
ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪದ ಮೇಲೆ ಅರ್ನಬ್ ಗೋಸ್ವಾಮಿ ಹಾಗೂ ಇತರ ಇಬ್ಬರು ಆರೋಪಿಗಳನ್ನು ನಿನ್ನೆ ಮುಂಬೈ ಪೊಲೀಸರು ಬಂಧಿಸಿದ್ದರು. ಆರೋಪಿಗಳನ್ನು ನವೆಂಬರ್ 18ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಅಲಿಬಾಗ್ ನ್ಯಾಯಾಲಯವು ಆದೇಶ ನೀಡಿದೆ.