ಖರಗ್‌ಪುರ (ಪಶ್ಚಿಮ ಬಂಗಾಳ): ಐಐಟಿ ಖರಗ್‌ಪುರದಲ್ಲಿ ಮತ್ತೊಬ್ಬ ವಿದ್ಯಾರ್ಥಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಂಗಳವಾರ ತಡರಾತ್ರಿ ಹಾಸ್ಟೆಲ್ ಕೋಣೆಯಲ್ಲಿ ವಿದ್ಯಾರ್ಥಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ತೆಲಂಗಾಣದ ಮೇದಕ್ ಜಿಲ್ಲೆಯ ತೂಪ್ರಾನ್ ಗ್ರಾಮದ ಕಿರಣ್ ಚಂದ್ರ (21) ಮೃತಪಟ್ಟ ವಿದ್ಯಾರ್ಥಿ. ಕಿರಣ್ ಚಂದ್ರ ಖರಗ್‌ಪುರ ಐಐಟಿಯ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದ ನಾಲ್ಕನೇ ವರ್ಷದ ವಿದ್ಯಾರ್ಥಿಯಾಗಿದ್ದರು.
ಪೊಲೀಸ್ ಮೂಲಗಳ ಪ್ರಕಾರ, ಐಐಟಿ ಕ್ಯಾಂಪಸ್‌ನ ಲಾಲ್ ಬಹದ್ದೂರ್ ಶಾಸ್ತ್ರಿ ಹಾಸ್ಟೆಲ್ ಕೋಣೆಯಲ್ಲಿ ಕಿರಣ್ ಚಂದ್ರ ನೇಣು ಬಿಗಿದ ಸ್ಥಿತಿಯಲ್ಲಿ ಇರುವುದನ್ನು ಆತನ ಸಹಪಾಠಿಗಳು ಗಮನಿಸಿ ವಿಷಯವನ್ನು ಹಾಸ್ಟೆಲ್ ಸಿಬ್ಬಂದಿ ಮತ್ತು ಇತರೆ ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ. ನಂತರ ಕಿರಣ್ನನ್ನು ರಕ್ಷಿಸಿ ಐಐಟಿಯ ಬಿ.ಸಿ.ರಾಯ್ ಟೆಕ್ನಾಲಜಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯುವಾಗ ವಿದ್ಯಾರ್ಥಿ ಜೀವಂತವಾಗಿದ್ದರು. ವೈದ್ಯರು ಆತನನ್ನು ಬದುಕಿಸಲು ಪ್ರಯತ್ನಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು ಎಂದು ತಿಳಿಸಿದ್ದಾರೆ.
ಕಿರಣ್ ಸಹೋದರನೂ ಐಐಟಿ ಖರಗ್‌ಪುರದ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ಘಟನೆ ನಡೆದಾಗ ಅವರೂ ಹಾಸ್ಟೆಲ್‌ನಲ್ಲಿದ್ದರು. ಐಐಟಿ ಖರಗ್‌ಪುರಕ್ಕೆ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ. ನಾಲ್ಕನೇ ವರ್ಷದ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಯ ಸಾವಿನ ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದ್ದೇವೆ. ಅಸಹಜ ಸಾವು ಎಂದು ಪ್ರಕರಣ ದಾಖಲಿಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಘಟನೆ ಸಂಬಂಧ ಹಾಸ್ಟೆಲ್‌ನ ಇತರ ವಿದ್ಯಾರ್ಥಿಗಳನ್ನು ವಿಚಾರಣೆಗೊಳಪಡಿಸಲಾಗಿದೆ. ಮೃತ ವಿದ್ಯಾರ್ಥಿಯ ಸಹೋದರನನ್ನೂ ಪೊಲೀಸರು ವಿಚಾರಿಸುತ್ತಿದ್ದಾರೆ.
ಘಟನೆಯ ಬಗ್ಗೆ ಐಐಟಿ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದು ಆತ್ಮಹತ್ಯೆ ಇರಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪೊಲೀಸರು ಅಧಿಕೃತ ಹೇಳಿಕೆ ನೀಡಿಲ್ಲ.
ಅಸ್ಸಾಂ ಮೂಲದ ಫೈಜಾನ್ ಅಹ್ಮದ್ ಎಂಬ ವಿದ್ಯಾರ್ಥಿ ಕಳೆದ ವರ್ಷ ಖರಗ್‌ಪುರ ಐಐಟಿಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದ. ಈ ಘಟನೆಯಲ್ಲಿ ಪೊಲೀಸರು ವಿಷಯವನ್ನು ಮುಚ್ಚಿಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ನಂತರ, ಕೋಲ್ಕತ್ತಾ ಹೈಕೋರ್ಟ್ ಕೋಲ್ಕತ್ತಾ ವೈದ್ಯಕೀಯ ಕಾಲೇಜಿನ ವಿಶೇಷ ವೈದ್ಯರ ಸಮಿತಿ ರಚಿಸಿ, ಫೈಜಾನ್ ಅವರ ಮೃತದೇಹವನ್ನು ಎರಡನೇ ಬಾರಿಗೆ ಮರಣೋತ್ತರ ಪರೀಕ್ಷೆ ನಡೆಸಿತ್ತು. ಹೈಕೋರ್ಟ್‌ನ ವರದಿಯ ಆಧಾರದ ಮೇಲೆ, ಅಹ್ಮದ್ ಸಾವಿನ ತನಿಖೆಗಾಗಿ ಎಸ್.ಜಯರಾಮ್ ನೇತೃತ್ವದಲ್ಲಿ ಎಸ್‌ಐಟಿ ರಚಿಸಲಾಗಿತ್ತು. ಕಳೆದ ಜೂನ್ನಲ್ಲೂ ಐಐಟಿ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಯೊಬ್ಬ ನಿಗೂಢವಾಗಿ ಸಾವನ್ನಪ್ಪಿದ್ದ. ಕಳೆದ ಒಂದೂವರೆ ವರ್ಷದಲ್ಲಿ ಐಐಟಿ ಖರಗ್‌ಪುರದಲ್ಲಿ ಮೂವರು ವಿದ್ಯಾರ್ಥಿಗಳು ನಿಗೂಢವಾಗಿ ಮೃತಪಟ್ಟಿರುವುದು ವರದಿಯಾಗಿದೆ.
ಇದನ್ನೂ ಓದಿ: ಆನ್ಲೈನ್ ಗೇಮ್ಸ್ನಲ್ಲಿ 1.5 ಕೋಟಿ ರೂ. ಗೆದ್ದಿದ್ದ ಪಿಎಸ್ಐ ಅಮಾನತು