ಮುಂಬೈ: ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ 'ಸಿಲ್ವರ್ ಓಕ್' ನಿವಾಸಕ್ಕೆ ಗುರುವಾರ ರಾತ್ರಿ ಭೇಟಿ ನೀಡಿದ್ದರು. ಇಬ್ಬರ ನಡುವೆ ಸುಮಾರು ಒಂದು ಗಂಟೆ ಕಾಲ ಮಾತುಕತೆ ನಡೆದಿದೆ ಎಂದು ವರದಿಯಾಗಿದ್ದು, ಈ ಭೇಟಿಯು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಅಲ್ಲದೆ, ಭೇಟಿ ವೇಳೆ ಸಂಸದೆ ಸುಪ್ರಿಯಾ ಸುಳೆ ಕೂಡ ಉಪಸ್ಥಿತರಿದ್ದರೆನ್ನಲಾಗಿದೆ ಕಳೆದ ಶನಿವಾರವಷ್ಟೇ ಬಾರಾಮತಿಯಲ್ಲಿ ಗೌತಮ್ ಅದಾನಿ ಅವರನ್ನು ಶರದ್ ಪವಾರ್ ಹೊಗಳಿದ್ದರು. ಇದಕ್ಕೂ ಮೊದಲು ಶರದ್ ಪವಾರ್ ಮತ್ತು ಗೌತಮ್ ಅದಾನಿ ಸೆಪ್ಟೆಂಬರ್ ತಿಂಗಳಿನಲ್ಲಿ ಭೇಟಿಯಾಗಿದ್ದರು. ಆದರೆ, ಗುರುವಾರ ರಾತ್ರಿ ಅದಾನಿಯವರು ಪವಾರ್ ಅವರನ್ನು ದಿಢೀರ್ ಭೇಟಿ ಮಾಡಿದ ಬಳಿಕ ಇಬ್ಬರ ನಡುವೆ ಏನು ಚರ್ಚೆ ನಡೆದಿದೆ ಎಂಬುದರ ಮೇಲೆ ಎಲ್ಲರ ಗಮನ ನೆಟ್ಟಿದೆ.
ಧಾರಾವಿ ಪುನರಾಭಿವೃದ್ಧಿ ವಿಚಾರದಲ್ಲಿ ಅದಾನಿಯನ್ನು ಶಿವಸೇನೆ, ಉದ್ಧವ್ ಠಾಕ್ರೆ ಗುಂಪು ಮತ್ತು ಕಾಂಗ್ರೆಸ್ ಗುರಿಯಾಗಿಸಿ ಟೀಕೆ ನಡೆಸುತ್ತಿವೆ. ಮತ್ತೊಂದೆಡೆ, ಮಹಾವಿಕಾಸ್ ಅಘಾಡಿ ಘಟಕದ ಶರದ್ ಪವಾರ್ ಗೌತಮ್ ಅದಾನಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಹಾಗಾಗಿ, ಶರದ್ ಪವಾರ್ ಮತ್ತು ಗೌತಮ್ ಅದಾನಿ ಮಾತುಕತೆ ಬಗ್ಗೆ ಮಹಾವಿಕಾಸ್ ಅಘಾಡಿಯಲ್ಲಿ ಆಂತರಿಕ ಗುಸುಗುಸು ಶುರುವಾಗಿದೆ.
ಅಲ್ಲದೆ, ಈ ಹಿಂದೆ ಗೌತಮ್ ಅದಾನಿಯನ್ನು ಸಂಸತ್ತಿನ ಜಂಟಿ ಸಮಿತಿಯಿಂದ ತನಿಖೆಗೆ ಒಳಪಡಿಸಬೇಕೆಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಬೇಡಿಕೆಯನ್ನು ಶರದ್ ಪವಾರ್ ವಿರೋಧಿಸಿದ್ದರು. ಗೌತಮ್ ಅದಾನಿ ಜೊತೆ ಪವಾರ್ ಅವರ ಆಪ್ತತೆ ಹೆಚ್ಚುತ್ತಿರುವುದು ಮುಂದಿನ ದಿನಗಳಲ್ಲಿ ಮಹಾ ವಿಕಾಸ್ ಅಘಾಡಿಯಲ್ಲಿ ಬಿರುಕಿನ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಏಷ್ಯಾದ ಅತಿದೊಡ್ಡ ಕೊಳೆಗೇರಿಯಾಗಿರುವ ಮುಂಬೈನ ಧಾರಾವಿಯ ಮರು ಅಭಿವೃದ್ಧಿ ಗುತ್ತಿಗೆಯನ್ನು ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರಿಗೆ ನೀಡಲಾಗುತ್ತದೆ ಎಂಬ ಮಾತು ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಉದ್ಧವ್ ಠಾಕ್ರೆ ಗುಂಪು ಅದಾನಿ ವಿರುದ್ಧ ಈ ಪ್ರದೇಶದಲ್ಲಿ ವಾಸಿಸುವ ಜನರಿಗಾಗಿ ಬೃಹತ್ ಪ್ರತಿಭಟನೆಯನ್ನು ಆಯೋಜಿಸಿತ್ತು. ಆದಾಗ್ಯೂ, ಎನ್‌ಸಿಪಿ ಮತ್ತು ಶರದ್ ಪವಾರ್, ಉದ್ಧವ್ ಅವರ ಈ ಪ್ರತಿಭಟನೆಯಿಂದ ಅಂತರ ಕಾಯ್ದುಕೊಂಡಿದ್ದರು. ಪ್ರತಿಭಟನೆ ವೇಳೆ ತಮ್ಮ ಭಾಷಣದಲ್ಲಿ ಉದ್ಧವ್ ಠಾಕ್ರೆ ಅವರು, ಗೌತಮ್ ಅದಾನಿ ಮತ್ತು ಬಿಜೆಪಿಯನ್ನು ಕಟುವಾಗಿ ಟೀಕಿಸಿದ್ದರು.
ಇದನ್ನೂ ಓದಿ: ಕೇರಳ ಉದ್ಯಮಿ ಹನಿಟ್ರ್ಯಾಪ್ ಪ್ರಕರಣ: ಮೈಸೂರು ಪೊಲೀಸರಿಂದ ಯುವತಿ ಸೇರಿ ಮೂವರ ಬಂಧನ