ದಾಂತೇವಾಡ (ಛತ್ತೀಸ್‌ಗಢ): ಛತ್ತೀಸ್‌ಗಢದಲ್ಲಿ ನಕ್ಸಲರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಮತ್ತೊಬ್ಬ ಬಿಜೆಪಿ ನಾಯಕನನ್ನು ಮಾವೋವಾದಿಗಳು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಕೊಲೆಯಾದವರನ್ನು ನಾರಾಯಣಪುರ ಜಿಲ್ಲೆಯ ಹಿತಮೇಟಾ ಗ್ರಾಮದ ಮಾಜಿ ಸರಪಂಚ್ ರಾಮಧರ್ ಅಲಾಮಿ ಎಂದು ಗುರುತಿಸಲಾಗಿದೆ. ಈ ಮೂಲಕ ಒಂದೇ ವಾರದ ಅಂತರದಲ್ಲಿ ಮೂರನೇ ಬಿಜೆಪಿ ಮುಖಂಡನ ಹತ್ಯೆ ನಡೆದಿದೆ.
ಫೆಬ್ರವರಿ 5ರಂದು ಬಿಜಾಪುರದಲ್ಲಿ ಬಿಜೆಪಿಯ ಉಸುರು ಮಂಡಲದ ಅಧ್ಯಕ್ಷ ನೀಲಕಂಠ ಕಕ್ಕೆಂ ಎಂಬುವವರನ್ನು ನಕ್ಸಲರು ಹತ್ಯೆ ಮಾಡಿದ್ದರು. ಇದೇ ಶುಕ್ರವಾರ (ಫೆ.10) ಛತ್ತೀಸ್‌ಗಢ ಬಿಜೆಪಿ ಘಟಕದ ಉಪಾಧ್ಯಕ್ಷ ನಾರಾಯಣ ಸಾಹು ಅವರನ್ನು ಕೊಲೆ ಮಾಡಿದ್ದರು. ಇವತ್ತು ಮಾಜಿ ಸರಪಂಚ್ ರಾಮಧರ್ ಅಲಾಮಿ ಅವರನ್ನು ನಕ್ಸಲರು ಹತ್ಯೆ ಮಾಡಿ ರಕ್ತಪಾತ ಮುಂದುವರೆಸಿದ್ದಾರೆ.
ಹತ್ಯೆಯ ಹೊಣೆ ಹೊತ್ತ ನಕ್ಸಲರು: ಛತ್ತೀಸ್‌ಗಢದ ಬಸ್ತಾರ್ ವಿಭಾಗವು ನಕ್ಸಲ್ ಪೀಡಿತ ಪ್ರದೇಶವಾಗಿದೆ. ಇದೇ ವಿಭಾಗದಲ್ಲೇ ಈ ಮೂವರು ಬಿಜೆಪಿ ಮುಖಂಡರ ಕೊಲೆಗಳ ನಡೆದಿವೆ. ಮದುವೆಗೆ ಹೋದ ಸಂದರ್ಭದಲ್ಲಿ ನೀಲಕಂಠ ಕಕ್ಕೆಂ ಅವರನ್ನು ಕೊಡಲಿ ಮತ್ತು ಚಾಕುವಿನಿಂದ ಕತ್ತು ಕೊಯ್ದು ಮಾಡಲಾಗಿತ್ತು. ಬಿಜೆಪಿ ಉಪಾಧ್ಯಕ್ಷ ನಾರಾಯಣ ಸಾಹು ಅವರನ್ನು ಗುಂಡಿಕ್ಕಿ ಹತ್ಯೆ ನಡೆಸಲಾಗಿತ್ತು. ರಾಮಧರ್ ಅಲಾಮಿ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಅಲ್ಲದೇ, ಈ ಕೊಲೆಯ ಹೊಣೆಯನ್ನು ನಕ್ಸಲರು ಹೊತ್ತುಕೊಂಡಿದ್ದು, ಪತ್ರವೊಂದು ಘಟನಾ ಸ್ಥಳದಲ್ಲಿ ಎಸೆದು ಹೋಗಿದ್ದಾರೆ.
ಮಾಹಿತಿದಾರರಾಗಿ ಕೆಲಸ ಮಾಡಿದ ಆರೋಪ: ಕೆಲಸದ ನಿಮಿತ್ತ ನಾರಾಯಣಪುರ ಜಿಲ್ಲೆಯ ಓರ್ಚಾ ತಾಲೂಕಿನ ತುಳತುಳಿ ಗ್ರಾಮಕ್ಕೆ ರಾಮಧರ್ ಅಲಾಮಿ ಹೋಗಿದ್ದರು. ಈ ವೇಳೆ ನಕ್ಸಲರು ದಾಳಿ ಕೊಲೆ ಮಾಡಿದ್ದಾರೆ. ಈ ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಕೊಲೆ ನಡೆದ ಸ್ಥಳದಲ್ಲಿ ನಕ್ಸಲರ ಎಸೆದ ಕರಪತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಾಜಿ ಸರಪಂಚ್ ಆಗಿರುವ ರಾಮಧರ್ ಅಲಾಮಿ ನಕ್ಸಲರ ಶರಣಾಗತಿ ನೀತಿಯಲ್ಲಿ ರಾಜ್ಯ ಪೊಲೀಸ್ ಪಡೆಗೆ ಸಹಾಯ ಮಾಡಿದ್ದಾರೆ. ಜೊತೆಗೆ ಪೊಲೀಸ್ ಮಾಹಿತಿದಾರರಾಗಿ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲ, ಬೋಧಘಾಟ್ ಜಲವಿದ್ಯುತ್ ಯೋಜನೆಯಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ನಕ್ಸಲರ ಪೂರ್ವ ಬಸ್ತಾರ್ ಡಿವಿಷನ್ ಕಮಿಟಿ ಹೆಸರಲ್ಲಿ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಜನವಿರೋಧಿ, ರಹಸ್ಯ ಕಾರ್ಯಾಚರಣೆಗಳನ್ನು ನಡೆಸದಂತೆ ಮತ್ತು ಮಾಹಿತಿದಾರನಂತೆ ವರ್ತಿಸದಂತೆ ಈಗಾಗಲೇ ಅವರಿಗೆ ಮೂರು ಬಾರಿ ಎಚ್ಚರಿಕೆ ನೀಡಲಾಗಿತ್ತು. ಆದರೆ, ಅವರು ಅರ್ಥ ಮಾಡಿಕೊಳ್ಳದ ಕಾರಣ ಮರಣದಂಡನೆ ವಿಧಿಸಲಾಗಿದೆ ಎಂದೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಈ ಘಟನೆಯ ಕುರಿತು ದಂತೇವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ತಿವಾರಿ ಮಾತನಾಡಿ, ರಾಮಧರ್ ಅಲಾಮಿ ಅವರು ಥುಳಥುಳಿ ಗ್ರಾಮಕ್ಕೆ ತೆರಳಿದ್ದಾಗ ಮಾವೋವಾದಿಗಳು ದಾಳಿ ಮಾಡಿ ಕೊಂದಿದ್ದಾರೆ. ತಮ್ಮ ಹಿಂಸಾಚಾರವನ್ನು ಹರಡುವ ಪ್ರಯತ್ನದಲ್ಲಿ ನಕ್ಸಲರು ಇಂತಹ ಕೊಲೆ ಮಾಡುತ್ತಿದ್ದು, ಹಂತಕರ ಪತ್ತೆಗಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ದಂತೇವಾಡ ಬಿಜೆಪಿ ಜಿಲ್ಲಾಧ್ಯಕ್ಷ ಚೈತ್ರಮ್ ಅಟಾಮಿ ಮಾತನಾಡಿ, ರಾಮಧರ್ ಅಲಾಮಿ ಬಿಜೆಪಿ ಕಾರ್ಯಕರ್ತರಾಗಿದ್ದರು. ದೀರ್ಘ ಕಾಲದಿಂದಲೂ ಪಕ್ಷದ ಸಂಘಟನೆಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು. ಅವರನ್ನು ನಕ್ಸಲರು ಬರ್ಬರವಾಗಿ ಹತ್ಯೆ ಮಾಡಿರುವುದು ಖಂಡನೀಯವಾಗಿದೆ.
ಇದನ್ನೂ ಓದಿ: ಕುಟುಂಬಸ್ಥರ ಮುಂದೆಯೇ ಬಿಜೆಪಿ ಮುಖಂಡನ ಹತ್ಯೆಗೈದ ನಕ್ಸಲರು