ಅಮರಾವತಿ, ಆಂಧ್ರಪ್ರದೇಶ: ಭಾರಿ ಮಳೆ ಆಂಧ್ರಪ್ರದೇಶದಲ್ಲಿ ಸಾಕಷ್ಟು ಅವಾಂತರ ಸೃಷ್ಟಿಸಿದೆ. ರಾಜ್ಯದ ಕಡಪ, ಚಿತ್ತೂರು, ಅನಂತಪುರ ಮತ್ತು ನೆಲ್ಲೂರು ಜಿಲ್ಲೆಗಳ 119 ಮಂಡಲಗಳ ಒಟ್ಟು 1990 ಗ್ರಾಮಗಳು ಪ್ರವಾಹಕ್ಕೆ ತುತ್ತಾಗಿವೆ. ಅದರಲ್ಲಿ 211 ಗ್ರಾಮಗಳು ಸಂಪೂರ್ಣವಾಗಿ ಜಲಾವೃತವಾಗಿವೆ ಎಂದು ರಾಜ್ಯ ಸರ್ಕಾರ ಅಧಿಕೃತ ಹೇಳಿಕೆ ನೀಡಿದೆ.
ಮಳೆಯಿಂದಾದ ಪ್ರವಾಹದಿಂದಾಗಿ ಒಟ್ಟು 44 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ 16 ಮಂದಿ ಕಾಣೆಯಾಗಿದ್ದಾರೆ. ಪೊಲೀಸ್, ಅಗ್ನಿಶಾಮಕ ದಳ ಮತ್ತು ಇತರ ಪಡೆಗಳು ಕಾಣೆಯಾದವರಿಗಾಗಿ ಶೋಧ ಕಾರ್ಯ ನಡೆಸುತ್ತಿವೆ.
ನವೆಂಬರ್ ತಿಂಗಳ ಮೊದಲ ವಾರದಲ್ಲಿ ಆರಂಭವಾದ ಮಳೆ ಇನ್ನೂ ಸುರಿಯುತ್ತಿದೆ. ರಾಯಲಸೀಮಾ ಭಾಗದಲ್ಲಿ ದಾಖಲೆಯಷ್ಟು ಮಳೆ ಸುರಿದಿದೆ. ಪ್ರಖ್ಯಾತ ಧಾರ್ಮಿಕ ಕ್ಷೇತ್ರದ ತಿರುಪತಿ ಭಾರಿ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದೆ. ಹಲವೆಡೆ ವಾಹನಗಳು ಕೊಚ್ಚಿ ಹೋಗಿವೆ' ಎಂದು ಸರ್ಕಾರ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ.
ನಡಲೂರು ಸೇತುವೆ ಬಳಿ ಸೇತುವೆಯಿಂದ ಸಾರಿಗೆ ಬಸ್ ಬಿದ್ದು, 10 ಮಂದಿ ಸಾವನ್ನಪ್ಪಿದ್ದಾರೆ. ಉಳಿದವರನ್ನು ಎಸ್ಡಿಆರ್ಎಫ್ ತಂಡದವರು ರಕ್ಷಿಸಿದ್ದಾರೆ. ನದಿಯೊಂದರ ದಡದಲ್ಲಿರುವ ಶಿವಾಲಯಂನಲ್ಲಿ ಪ್ರವಾಹದಿಂದಾಗಿ 10 ಮಂದಿ ಸಾವನ್ನಪ್ಪಿದ್ದಾರೆ.
ಈಗ ಸದ್ಯಕ್ಕೆ ಸ್ಥಗಿತಗೊಳಿಸಲಾಗಿದ್ದ ವಿದ್ಯುತ್ ಪೂರೈಕೆಯನ್ನು ನಾಲ್ಕೂ ಜಿಲ್ಲೆಗಳಲ್ಲಿ ಒದಗಿಸಲಾಗುತ್ತಿದೆ. 95,949 ಪ್ರವಾಹ ಪೀಡಿತ ಕುಟುಂಬಗಳಿಗೆ ನೆರವು ನೀಡಲಾಗಿದೆ. ಸಂಪೂರ್ಣ ಹಾನಿಗೊಳಗಾದ ಮತ್ತು ಭಾಗಶಃ ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡುವ ಕಾರ್ಯ ಚಾಲ್ತಿಯಲ್ಲಿದೆ ಎಂದು ಸರ್ಕಾರ ಹೇಳಿದೆ.
ಮನೆ ಸಂಪೂರ್ಣ ಹಾನಿಗೀಡಾದವರಿಗೆ ಹೊಸ ಮನೆ ನಿರ್ಮಾಣಕ್ಕೆ ಸರ್ಕಾರದಿಂದ 1.8 ಲಕ್ಷ ರೂಪಾಯಿ ಮತ್ತು ಪರಿಹಾರವಾಗಿ 95 ಸಾವಿರ ರೂಪಾಯಿಯನ್ನು ನೀಡಲು ನಿರ್ಧರಿಸಲಾಗಿದೆ. ಸತ್ತ ಜಾನುವಾರುಗಳ ಮಾಲೀಕರಿಗೂ ಪರಿಹಾರವನ್ನು ನೀಡಲು ಆದೇಶಿಸಲಾಗಿದೆ. ಜೊತೆಗೆ ಜಾನುವಾರುಗಳಿಗೆ ಲಸಿಕೆ ಹಾಕುವಂತೆ, ಮೇವು ಒದಗಿಸುವಂತೆಯೂ ಸರ್ಕಾರ ಆದೇಶ ನೀಡಿದೆ.
ಸಂತ್ರಸ್ತ ಕುಟುಂಬಗಳಿಗೆ ಪ್ರತಿ ಕುಟುಂಬಕ್ಕೆ 25 ಕೆಜಿ ಅಕ್ಕಿ, 1 ಕೆಜಿ ಬೇಳೆ, 1 ಲೀಟರ್ ತಾಳೆ ಎಣ್ಣೆ, 1ಕೆಜಿ ಈರುಳ್ಳಿ, 1 ಕೆಜಿ ಆಲೂಗಡ್ಡೆ ನೀಡಲು ಈ ಮೊದಲೇ ಸರ್ಕಾರ ಆದೇಶಿಸಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ವತಿಯಿಂದ ಈ ನೆರವು ನೀಡಲಾಗುತ್ತದೆ.
ಇದನ್ನೂ ಓದಿ: ಭಾರತದಿಂದ ಕೊರೊನಾ ಲಸಿಕೆ ರಫ್ತು ಪುನಾರಂಭ: ನ.30 ರಿಂದ ಕೋವಾಕ್ಸ್ ಆಮದಿಗೆ ಕೆನಡಾ ಅನುಮೋದನೆ