ನವದೆಹಲಿ: ಎಐಸಿಸಿ ಅಧ್ಯಕ್ಷರ ಚುನಾವಣೆ ದಿನಾಂಕ ನಿಗದಿಯಾದರೂ ಮತದಾರರ ಪಟ್ಟಿಯ ಬಗ್ಗೆ ಅಪಸ್ವರ ಕೇಳಿ ಬಂದಿದೆ. ನಿನ್ನೆ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಿನ್ನಮತೀಯ ನಾಯಕ ಆನಂದ್ ಶರ್ಮಾ ಅವರು ಮತಪಟ್ಟಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪಕ್ಷದ ನಿಯಮಗಳ ಬಗ್ಗೆಯೂ ಪ್ರಶ್ನೆ ಎತ್ತಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಇದನ್ನು ಪಕ್ಷ ನಿರಾಕರಿಸಿದೆ.
ಸಿಡಬ್ಲ್ಯೂಸಿ ಸಭೆಯಲ್ಲಿ ಪಕ್ಷದ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಅವರು ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯ ದಿನಾಂಕ ಘೋಷಿಸುವ ಮೊದಲು ಮಾತನಾಡಿದ ಶರ್ಮಾ, ಚುನಾವಣೆಗೂ ಮೊದಲು ಮತದಾರರ ಪಟ್ಟಿಯನ್ನು ಅಂತಿಮಗೊಳಿಸಲಾಗಿಲ್ಲ. ಇದಕ್ಕಾಗಿ ಯಾವುದೇ ವರ್ಚುಯಲ್ ಅಥವಾ ಭೌತಿಕ ಸಭೆ ನಡೆಸಿಲ್ಲ ಎಂಬ ದೂರುಗಳಿವೆ. ಪಕ್ಷದ ನಿಯಮಗಳು ಜಾರಿಯಲ್ಲಿವೆಯೇ ಎಂದು ಪ್ರಶ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜಿ-23 ಭಿನ್ನಮತೀಯ ನಾಯಕರಲ್ಲಿ ಒಬ್ಬರಾಗಿರುವ ಶರ್ಮಾ ಅವರು ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಗೆ ಮತ ಚಲಾಯಿಸುವ ಯಾವುದೇ ಪ್ರತಿನಿಧಿಗಳ ಪಟ್ಟಿಯನ್ನು ಪ್ರದೇಶ ಕಾಂಗ್ರೆಸ್ ಸಮಿತಿಗಳು ನೀಡಿಲ್ಲ. ಇದು ಚುನಾವಣಾ ಪ್ರಕ್ರಿಯೆಯ ಪಾವಿತ್ರ್ಯತೆ ಹಾಳು ಮಾಡುತ್ತದೆ ಎಂದು ಅವರು ಹೇಳಿದ್ದಾರೆ.
ಸಿಡಬ್ಲ್ಯೂಸಿ ಸಭೆಯಲ್ಲಿ ಆಕ್ಷೇಪ ಕೇಳಿಬಂದಿದೆ ಎಂಬ ಆರೋಪವನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ನಿರಾಕರಿಸಿದ್ದಾರೆ. ಪಕ್ಷದ ಅಧ್ಯಕ್ಷರ ಚುನಾವಣಾ ದಿನಾಂಕವನ್ನು ಸಿಡಬ್ಲ್ಯೂಸಿ ಸದಸ್ಯರು ಸರ್ವಾನುಮತದಿಂದ ಅನುಮೋದಿಸಿದ್ದಾರೆ. ಈ ಬಗ್ಗೆ ಯಾವುದೇ ಆಕ್ಷೇಪ ಉಂಟಾಗಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಸಭೆ ನಡೆಸಿಲ್ಲ- ವೇಣುಗೋಪಾಲ್: ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಚುನಾವಣೆಗೆ ಯಾರು ಬೇಕಾದರೂ ಸ್ಪರ್ಧಿಸಬಹುದು, ಇದು ಬಹಿರಂಗ ಚುನಾವಣೆ. ಚುನಾವಣೆಯಲ್ಲಿ ಮತ ಚಲಾಯಿಸುವ ಪ್ರತಿನಿಧಿಗಳ ಪಟ್ಟಿ ಅಂತಿಮಗೊಳಿಸುವಾಗ ಕಾಂಗ್ರೆಸ್ ಸಂವಿಧಾನವನ್ನು ಅನುಸರಿಸಲಾಗಿದೆಯೇ ಎಂದು ಶರ್ಮಾ ಅವರು ಕೇಳಿದ್ದಾರೆ ಎಂದು ಹೇಳಲಾಗಿದೆ. ಪ್ರದೇಶ ಕಾಂಗ್ರೆಸ್ ಸಮಿತಿ ಈ ಕುರಿತು ಯಾವುದೇ ಪಟ್ಟಿಯನ್ನು ಸ್ವೀಕರಿಸಿಲ್ಲ. ಭೌತಿಕ ಅಥವಾ ವರ್ಚುಯಲ್ ಸಭೆಯನ್ನೂ ನಡೆಸಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಚುನಾವಣೆಯ ವೇಳೆ ಮತ ಚಲಾಯಿಸುವ ಮತದಾರರ ಪಟ್ಟಿ ಬಿಡುಗಡೆ ಮಾಡಲೂ ಆನಂದ್ ಶರ್ಮಾ ಕೇಳಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಸೋನಿಯಾ ಗಾಂಧಿ ಅವರು ಉತ್ತರಿಸಲು ಮಿಸ್ತ್ರಿ ಅವರಿಗೆ ಹೇಳಿದರು. ಮತದಾರರ ಪಟ್ಟಿಯು ಪರಿಷ್ಕರಣೆಯಲ್ಲಿದೆ. ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯಲ್ಲಿ 9 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಮತ ಚಲಾಯಿಸಲಿದ್ದು, ಎಲ್ಲ ಪಟ್ಟಿಗಳನ್ನು ಚುನಾವಣಾಧಿಕಾರಿಗಳು ಪರಿಶೀಲಿಸಿದ್ದಾರೆ ಎಂದು ಅವರು ಹೇಳಿದರು.
ಪಕ್ಷದ ಹಿರಿಯ ನಾಯಕ ಆನಂದ್ ಶರ್ಮಾ ಅವರು ವಾರದ ಹಿಂದೆ ಹಿಮಾಚಲ ಪ್ರದೇಶ ಸ್ಟೀರಿಂಗ್ ಕಮಿಟಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಈಚೆಗಷ್ಟೇ ಪಕ್ಷಕ್ಕೆ ರಾಜೀನಾಮೆ ನೀಡಿರುವ ಗುಲಾಂ ನಬಿ ಆಜಾದ್ ಅವರನ್ನು ಭೇಟಿ ಮಾಡಿದ್ದರು. ಇದರಿಂದ ಶರ್ಮಾ ಕೂಡ ಪಕ್ಷ ತೊರೆಯಲಿದ್ದಾರೆ ಎಂದು ಹೇಲಾಗುತ್ತಿದೆ.
ಓದಿ: ಪಾಕಿಸ್ತಾನದ ವಿರುದ್ಧ ಜಯಗಳಿಸಿದ ಭಾರತಕ್ಕೆ ಅಭಿನಂದಿಸಿದ ಮೋದಿ, ರಾಹುಲ್