ಗುವಾಹಟಿ (ಅಸ್ಸಾಂ) : ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸುವ ಮೂಲಕ ನರೇಂದ್ರ ಮೋದಿ ಅವರೇ ಸತತ 3ನೇ ಬಾರಿಗೆ ಪ್ರಧಾನಿಯಾಗಲಿದ್ದಾರೆ. ಕಾಂಗ್ರೆಸ್‌ಗೆ ಲೋಕಸಭೆಯಲ್ಲಿ ಈಗಿನ ಸಂಖ್ಯಾಬಲವನ್ನೂ ಸಹ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಅಸ್ಸಾಂನಲ್ಲಿ ಗುರುವಾರ ಸರ್ಕಾರಿ ಉದ್ಯೋಗ ಪಡೆದ ಅಭ್ಯರ್ಥಿಗಳಿಗೆ 44,703 ನೇಮಕಾತಿ ಪತ್ರಗಳನ್ನು ವಿತರಿಸಿದ ನಂತರ ಸಾರ್ವಜನಿಕ ಸಭೆಯ ಉದ್ದೇಶಿಸಿ ಮಾತನಾಡಿದ ಬಿಜೆಪಿ ನಾಯಕ ಶಾ, ಕಾಂಗ್ರೆಸ್ ಪಕ್ಷವು, "ನಕಾರಾತ್ಮಕ ಮನೋಭಾವ" ಹೊಂದಿದೆ. ನೂತನ ಸಂಸತ್ತಿನ ಕಟ್ಟಡದ ಉದ್ಘಾಟನೆ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ" ಎಂದು ದೂರಿದರು.
2024 ರ ಲೋಕಸಭಾ ಚುನಾವಣೆಯಲ್ಲಿ 300 ಕ್ಕೂ ಹೆಚ್ಚು ಸದಸ್ಯ ಸ್ಥಾನಗಳೊಂದಿಗೆ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ. ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನಮಾನ ಕಳೆದುಕೊಂಡಿದೆ. ಮುಂಬರುವ ದಿನಗಳಲ್ಲಿ ಲೋಕಸಭೆಯಲ್ಲಿ ಈಗಿರುವ ಸ್ಥಾನಗಳನ್ನು ಸಹ ಆ ಪಕ್ಷ ಪಡೆಯಲು ಸಾಧ್ಯವಾಗದು ಎಂದು ಟೀಕಿಸಿದರು.
ಇದನ್ನೂ ಓದಿ : ವಿಧಾನಸಭೆ ಸೋಲಿನ ಶಾಕ್ನಿಂದ ಇನ್ನೂ ಹೊರಬಾರದ ಬಿಜೆಪಿ: ರಾಜ್ಯಾಧ್ಯಕ್ಷ, ಪ್ರತಿಪಕ್ಷ ನಾಯಕರ ನೇಮಕ ವಿಳಂಬ
ಮೇ 28 ರಂದು ನೂತನ ಸಂಸತ್ ಭವನವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಆದರೆ, ರಾಷ್ಟ್ರಪತಿಗಳೇ ಉದ್ಘಾಟನೆ ಮಾಡಲಿ ಎಂಬ ನೆಪವೊಡ್ಡಿ ಕಾಂಗ್ರೆಸ್ ಪಕ್ಷವು ಉದ್ಘಾಟನಾ ಕಾರ್ಯಕ್ರಮ ಬಹಿಷ್ಕರಿಸುವ ಮೂಲಕ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್ನ ಈ ನಕಾರಾತ್ಮಕ ಧೋರಣೆ ಖಂಡನೀಯ ಎಂದರು.
ಇದನ್ನೂ ಓದಿ : 'ಆಧುನಿಕ ಭಾರತ ಇತಿಹಾಸಕ್ಕೆ ನಾಲ್ವರು ಗುಜರಾತಿಗಳಿಂದ ಮಹತ್ವದ ಕೊಡುಗೆ'
"ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ಆಯಾ ರಾಜ್ಯಪಾಲರ ಬದಲಿಗೆ ಆಯಾ ಮುಖ್ಯಮಂತ್ರಿಗಳು ಮತ್ತು ಕಾಂಗ್ರೆಸ್ ನಾಯಕರಾದ ಸೋನಿಯಾ ಮತ್ತು ರಾಹುಲ್ ಗಾಂಧಿ ಅವರಿಂದ ಹೊಸ ವಿಧಾನಸಭಾ ಕಟ್ಟಡಗಳಿಗೆ ಶಂಕುಸ್ಥಾಪನೆ ಮಾಡಿದ ಉದಾಹರಣೆಗಳಿವೆ. ಕಾಂಗ್ರೆಸ್ನವರು ಸಂಸತ್ತಿನ ಒಳಗೆ ಪ್ರಧಾನಿಗೆ ಮಾತನಾಡಲು ಬಿಡುವುದಿಲ್ಲ. ಆದರೆ, ಭಾರತೀಯರು ಮೋದಿಯವರಿಗೆ ಮಾತನಾಡಲು ಜನಾದೇಶ ನೀಡಿದ್ದಾರೆ. ಪ್ರಧಾನಿಯನ್ನು ಗೌರವಿಸದೇ ಇರುವುದು ಜನಾದೇಶವನ್ನು ಅವಮಾನಿಸಿದಂತೆ" ಎಂದು ಹೇಳಿದರು.
ಇದನ್ನೂ ಓದಿ : ರಾಜ್ಯದಲ್ಲಿ ನಡೆಯದ ಮೋದಿ- ಶಾ ಮ್ಯಾಜಿಕ್; ಕೈ ಕೊಟ್ಟ ಹೊಸ ಪ್ರಯೋಗ
2021 ರ ವಿಧಾನಸಭಾ ಚುನಾವಣೆಗೂ ಮುನ್ನ ಅಸ್ಸಾಂನಲ್ಲಿ ಒಂದು ಲಕ್ಷ ಸರ್ಕಾರಿ ಉದ್ಯೋಗಗಳನ್ನು ನೀಡುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಅದರಂತೆ ಎರಡೂವರೆ ವರ್ಷಗಳಲ್ಲಿ 86,000 ಉದ್ಯೋಗಗಳನ್ನು ನೀಡಲಾಗಿದೆ. ಇನ್ನುಳಿದ ಉದ್ಯೋಗವಕಾಶಗಳನ್ನು ಮುಂದಿನ ಆರು ತಿಂಗಳೊಳಗೆ ನೀಡಲಾಗುವುದು ಎಂದು ಅಮಿತ್ ಶಾ ಇದೇ ವೇಳೆ ಭರವಸೆ ನೀಡಿದರು.
ಇದನ್ನೂ ಓದಿ : ಲೋಕಸಭೆ ಚುನಾವಣೆಗೆ ಇದು ಮೆಟ್ಟಿಲು, ರಾಹುಲ್ ಗಾಂಧಿ ಪ್ರಧಾನಿ ಆಗಲಿ: ಸಿದ್ದರಾಮಯ್ಯ
ಕರ್ನಾಟಕ ವಿಧಾನಸಭಾ ಚುನಾವಣೆ: ಇನ್ನು, ಇತ್ತೀಚೆಗೆ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 135, ಬಿಜೆಪಿ 65, ಜೆಡಿಎಸ್ 19 ಸ್ಥಾನಗಳನ್ನು ಗಳಿಸಿವೆ. ಚುನಾವಣೆಗೆ ಭಾರತೀಯ ಜನತಾ ಪಕ್ಷದ ಪರವಾಗಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಎಲ್ಲ ತಂತ್ರಗಾರಿಕೆಗಳನ್ನು ರೂಪಿಸಿದ್ದರು. ವ್ಯಾಪಕ ಪ್ರಚಾರ ಸಹ ನಡೆಸಲಾಗಿತ್ತು. ಆದರೂ ಬಿಜೆಪಿ ಸೋತಿದ್ದು, ರಾಜಕೀಯ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿದೆ.