ರಾಮನಾಥಪುರಂ (ತಮಿಳುನಾಡು): ತಮಿಳುನಾಡು ರಾಜ್ಯ ಪ್ರವಾಸ ಕೈಗೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಬೆಳಗ್ಗೆ ರಾಮೇಶ್ವರಂನ ರಾಮನಾಥಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ದೇವಾಲಯದ ಆಡಳಿತ ಮಂಡಳಿ ಅವರನ್ನು ಗೌರವಿಸಿದರು.
ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರ ಯಾತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಶಾ ದೇವಾಲಯಕ್ಕೆ ಭೇಟಿ ನೀಡಿದರು. ಈ ವೇಳೆ ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ, ಹೈನುಗಾರಿಕೆ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಎಲ್ ಮುರುಗನ್ ಹಾಗೂ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಉಪಸ್ಥಿತರಿದ್ದರು.
ಶುಕ್ರವಾರ ರಾಮೇಶ್ವರಂನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ಹಮ್ಮಿಕೊಂಡಿದ್ದ ‘ಎನ್ ಮಣ್ ಎನ್ ಮಕ್ಕಳ್’ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿದ್ದರು. ಈ ವೇಳೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ಕೇಂದ್ರ ಸಚಿವ ಅಮಿತ್ ಶಾ, ಕಾಂಗ್ರೆಸ್ ಮತ್ತು ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಇಂದು ಗೃಹ ಸಚಿವರು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಕುರಿತ ಕೃತಿಯೊಂದನ್ನು ಬಿಡುಗಡೆ ಮಾಡಲಿದ್ದಾರೆ. ಬಳಿಕ ರಾಮೇಶ್ವರಂನ ಪೆಯ್ಕರುಂಬುನಲ್ಲಿರುವ ಎಪಿಜೆ ಅಬ್ದುಲ್ ಕಲಾಂ ಅವರ ಮನೆಗೆ ಭೇಟಿ ಕುಟುಂಬದವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಜೊತೆಗೆ ಅವರ ಸ್ಮಾರಕಕ್ಕೂ ಭೇಟಿ ನೀಡಲಿದ್ದಾರೆ. ನಂತರ ಸ್ವಾಮಿ ವಿವೇಕಾನಂದರ ಸ್ಮಾರಕಕ್ಕೆ ಭೇಟಿ ನೀಡಿ, ಬಳಿಕ ಮಂಡಬಮ್‌ನಿಂದ ಮಧುರೈ ವಿಮಾನ ನಿಲ್ದಾಣಕ್ಕೆ ಹೆಲಿಕಾಪ್ಟರ್‌ನಲ್ಲಿ ತೆರಳಿದ್ದಾರೆ.
'ಎನ್ ಮಣ್, ಎನ್ ಮಕ್ಕಳ್' ಯಾತ್ರೆ : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಮಧುರೈಗೆ ಬಂದಿಳಿದಿದ್ದರು. ಬಳಿಕ ರಾಮೇಶ್ವರಂ ಪಟ್ಟಣಕ್ಕೆ ಆಗಮಿಸಿದ್ದ ಅವರು ಭಾರತೀಯ ಜನತಾ ಪಕ್ಷದಿಂದ 'ಎನ್ ಮಣ್, ಎನ್ ಮಕ್ಕಳ್' (ನನ್ನ ಭೂಮಿ, ನನ್ನ ಜನರು) ಎಂಬ ಆರು ತಿಂಗಳ ಸುದೀರ್ಘ ಪಾದಯಾತ್ರೆಗೆ ಚಾಲನೆ ನೀಡಿದ್ದರು. 2024ರ ಲೋಕಸಭಾ ಚುನಾವಣಾ ದೃಷ್ಟಿಯಿಂದ ಈ ಪಾದಯಾತ್ರೆ ಮಹತ್ವದ್ದೆನಿಸಿದೆ.
ರಾಮೇಶ್ವರಂನಿಂದ ಪ್ರಾರಂಭವಾಗುವ ಈ ಪಾದಯಾತ್ರೆ ರಾಜ್ಯಾದ್ಯಂತ ಎಲ್ಲಾ 234 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಸಾಗಲಿದೆ. ಲೋಕಸಭಾ ಚುನಾವಣೆ ಘೋಷಣೆಗೂ ಮುನ್ನ ಜನವರಿ 11ರಂದು ಈ ಪಾದಯಾತ್ರೆ ಮುಕ್ತಾಯಗೊಳ್ಳಲಿದೆ. ಈ ಯಾತ್ರೆಯ ನೇತೃತ್ವವನ್ನು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ವಹಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಅಣ್ಣಾಮಲೈ, ನನ್ನ ಮಣ್ಣು ನನ್ನ ಜನ ಯಾತ್ರೆ ಮೂಲಕ ನಾವೆಲ್ಲರೂ ರಾಜ್ಯದ 234 ವಿಧಾನಸಭಾ ಕ್ಷೇತ್ರಗಳಲ್ಲಿ 168 ದಿನಗಳ ಸುದೀರ್ಘ ಪ್ರಯಾಣ ನಡೆಸಲಿದ್ದೇವೆ. ಪ್ರತಿಯೊಬ್ಬರನ್ನು ಭೇಟಿ ಮಾಡಿ ಅವರೊಂದಿಗೆ ಸಂವಾದ ನಡೆಸಲಿದ್ದೇವೆ. ಪ್ರಧಾನಿ ಮೋದಿಯವರಿಗೆ ಶುಭ ಸಂದೇಶ ತೆಗೆದುಕೊಂಡು ಹೋಗಲಿದ್ದೇವೆ. ಯಾತ್ರೆ ವೇಳೆ ಯೋಜಿಸಲಾಗಿರುವ 10 ಪ್ರಮುಖ ಸಭೆಯಲ್ಲಿ ಕನಿಷ್ಠ ಒಬ್ಬ ಕೇಂದ್ರ ಸಚಿವರು ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದ್ದರು.
ಇದನ್ನೂ ಓದಿ : ಪ್ರಧಾನಿ ಮೋದಿ ಜೊತೆ ವೇದಿಕೆ ಹಂಚಿಕೊಳ್ಳಲಿರುವ ಎನ್ಸಿಪಿ ನಾಯಕ ಶರದ್ ಪವಾರ್ : ಇಂಡಿಯಾ ಒಕ್ಕೂಟ ಅಸಮಾಧಾನ