ನವದೆಹಲಿ: ಡಿಸಿಜಿಐಯು ಕೋವಿಡ್ -19 ಲಸಿಕೆಗಳನ್ನು ಅನುಮೋದಿಸಿದ ಹಿನ್ನೆಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಭಾರತೀಯ ಜನತಾ ಪಕ್ಷದ ಮುಖ್ಯಸ್ಥ ಜೆ.ಪಿ. ನಡ್ಡಾ ವಿಜ್ಞಾನಿಗಳು ಮತ್ತು ಮುಂಚೂಣಿ ಆರೋಗ್ಯ ಕಾರ್ಯಕರ್ತರ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಭಾರತದಲ್ಲಿ ಲಸಿಕೆಗಳನ್ನು ತಯಾರಿಸಲು ಪ್ರೋತ್ಸಾಹಿಸಿದ ಪ್ರಧಾನಿ ಮೋದಿಯವರ ಕಾರ್ಯವು ಆತ್ಮನಿರ್ಭರ ಭಾರತದ ಉಪಕ್ರಮವನ್ನು ಹೆಚ್ಚಿಸುವಲ್ಲಿ ಪ್ರಮುಖವಾಗಿದೆ ಎಂದು ಶಾ ಹೆಮ್ಮೆ ಪಟ್ಟಿದ್ದಾರೆ. ಇದು ಭಾರತಕ್ಕೆ ಒಂದು ಮಹತ್ವದ ಸಾಧನೆ. ಭಾರತವನ್ನು ಹೆಮ್ಮೆ ಪಡುವಂತೆ ಮಾಡಿದ ನಮ್ಮ ಅತ್ಯಂತ ಪ್ರತಿಭಾವಂತ ಮತ್ತು ಶ್ರಮಶೀಲ ವಿಜ್ಞಾನಿಗಳಿಗೆ ನಾನು ನಮಸ್ಕರಿಸುತ್ತೇನೆ. ಕೋವಿಡ್ ಮುಕ್ತ ಭಾರತದತ್ತ ಶ್ರಮಿಸಿದ್ದಕ್ಕಾಗಿ ಮೋದಿ ಜಿ ಅವರಿಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.
ದೂರದೃಷ್ಟಿಯ ನಾಯಕತ್ವವು ಭಾರಿ ಬದಲಾವಣೆಯನ್ನು ತರುತ್ತದೆ. ಬಿಕ್ಕಟ್ಟಿನ ಸಂದರ್ಭದಲ್ಲಿ ನಾವು ಹೊಸತನವನ್ನು ನೋಡುವ ಹಾಗೆ ಆಯಿತು. ಮೇಡ್ ಇನ್ ಇಂಡಿಯಾ ಲಸಿಕೆಗಳಿಗೆ ನೀಡಿದ ಅನುಮೋದನೆಯು ಪ್ರಧಾನ ಮಂತ್ರಿ ಅವರ ಆತ್ಮನಿರ್ಭರ ಭಾರತದ ದೂರದೃಷ್ಟಿಯ ಫಲ ಎಂದು ಹೇಳಿರುವ ಶಾ, ಸಾಂಕ್ರಾಮಿಕ ಸಮಯದಲ್ಲಿ ಸೇವೆ ಸಲ್ಲಿಸಿದ ವಿಜ್ಞಾನಿಗಳು, ವೈದ್ಯರು, ವೈದ್ಯಕೀಯ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಮತ್ತು ಎಲ್ಲಾ ಕೊರೊನಾ ವಾರಿಯರ್ಸ್ಗೆ ಶಾ ಧನ್ಯವಾದ ಅರ್ಪಿಸಿದ್ದಾರೆ. ಹಾಗೆಯೇ ಮಾನವಕುಲದ ಬಗ್ಗೆ ಅವರ ನಿಸ್ವಾರ್ಥ ಸೇವೆಗಾಗಿ ರಾಷ್ಟ್ರವು ಯಾವಾಗಲೂ ಅವರಿಗೆ ಕೃತಜ್ಞರಾಗಿರಬೇಕು ಎಂದು ಹೊಗಳಿದ್ದಾರೆ.
ಇನ್ನು ಬಿಜೆಪಿ ಮುಖ್ಯಸ್ಥ ನಡ್ಡಾ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಕೋವಿಡ್ -19 ರಿಂದ ರಕ್ಷಿಸಲು ಎರಡು ಸ್ಥಳೀಯ ಲಸಿಕೆಗಳನ್ನು ತುರ್ತು ಬಳಕೆಗೆ ಡಿಸಿಜಿಐ ಅನುಮೋದನೆ ನೀಡಿದೆ. ದೇಶಕ್ಕೆ ಇದೊಂದು ನಿರ್ಣಾಯಕ ಮತ್ತು ಐತಿಹಾಸಿಕ ಕ್ಷಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ದೇಶ ಹೊಸ ಆಯಾಮವನ್ನು ಸ್ಥಾಪಿಸಿದೆ. ಎಲ್ಲಾ ವಿಜ್ಞಾನಿಗಳು ಮತ್ತು ವೈದ್ಯರಿಗೆ ಅನೇಕ ಅಭಿನಂದನೆಗಳು ಎಂದಿದ್ದಾರೆ.
ಭಾರತವನ್ನು ಜಾಗತಿಕ ಆರೋಗ್ಯ ಕೇಂದ್ರವನ್ನಾಗಿ ಮಾಡುವಲ್ಲಿ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಮಾಡಿದ ಕಾರ್ಯಗಳು ಶ್ಲಾಘನೀಯ. ಭಾರತವು ಜಾಗತಿಕ ಆರೋಗ್ಯ ಕೇಂದ್ರವಾಗಿ ಮಾರ್ಪಟ್ಟಿದೆ. ಕೋವಿಡ್ ವಿರುದ್ಧ ಹೋರಾಡಲು ಮೋದಿ ಜಿ ದೇಶದ ಪ್ರತಿಯೊಂದು ವಿಭಾಗವನ್ನು ಒಟ್ಟುಗೂಡಿಸಿದರು. ಸಾರ್ವಜನಿಕ ಸೇವೆಗೆ ಮೀಸಲಾಗಿರುವ ವೈದ್ಯರು, ಪೊಲೀಸ್ ಮತ್ತು ನೈರ್ಮಲ್ಯ ಕಾರ್ಯಕರ್ತರಿಗೆ ನಾನು ವಂದಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.