ಅಗರ್ತಲಾ (ತ್ರಿಪುರಾ) : ತ್ರಿಪುರಾದಲ್ಲಿನ ಶಾಸಕರ ಒಂದು ವರ್ಗದ ನಡುವೆ ಹೆಚ್ಚುತ್ತಿರುವ ಅಸಮಾಧಾನದ ನಡುವೆಯೇ ಹೊಸ ಮುಖ್ಯಮಂತ್ರಿ ಮಾಣಿಕ್ ಸಹಾ ಅಧಿಕಾರ ಸ್ವೀಕರಿಸಿದ್ದಾರೆ. ಈಗ ಒಂದು ದಿನದ ನಂತರ ಅಂದರೆ ಇಂದು 11 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಇಲ್ಲಿನ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ 11 ಸಚಿವರಲ್ಲಿ ಬಿಜೆಪಿಯ ಒಂಬತ್ತು ಶಾಸಕರು ಮತ್ತು ಇಬ್ಬರು ಐಪಿಎಫ್‌ಟಿ ಶಾಸಕರಿಗೆ ರಾಜ್ಯಪಾಲ ಸತ್ಯದೇವ್ ನಾರಾಯಣ್ ಆರ್ಯ ಅವರು ಪ್ರಮಾಣ ವಚನ ಬೋಧಿಸಿದ್ದಾರೆ. ಇವರಲ್ಲಿ ಒಂಬತ್ತು ಮಂದಿ ಮಾಜಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ನೇತೃತ್ವದ ಸಚಿವ ಸಂಪುಟದಲ್ಲಿದ್ದವರು.
ಬಿಪ್ಲಬ್ ಕುಮಾರ್ ದೇಬ್ ಅವರು ರಾಜೀನಾಮೆ ನೀಡಿದ ಒಂದು ದಿನದ ನಂತರ ತ್ರಿಪುರ ಬಿಜೆಪಿ ಅಧ್ಯಕ್ಷರೂ ಆಗಿರುವ ಸಹಾ ಅವರು ಭಾನುವಾರ ರಾಜ್ಯದ 12 ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 60 ಸದಸ್ಯರ ತ್ರಿಪುರಾ ಅಸೆಂಬ್ಲಿಗೆ 2023 ರ ಜನವರಿ-ಫೆಬ್ರವರಿಯಲ್ಲಿ ಚುನಾವಣೆ ನಡೆಯಲಿದೆ.
2018ರ ಮಾರ್ಚ್ 9ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ - ಐಪಿಎಫ್‌ಟಿ ಮೈತ್ರಿಕೂಟವು ಎಡರಂಗವನ್ನು ಸೋಲಿಸಿ ಅಧಿಕಾರಕ್ಕೆ ಬಂದಿತ್ತು. ಆಗ ಬಿಪ್ಲಬ್ ಕುಮಾರ್ ದೇಬ್ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದರು.
ಇದನ್ನೂ ಓದಿ : ಕಾಂಗ್ರೆಸ್ನ ಭಾರತ್ ಜೋಡೋ ಶತಮಾನದ ದೊಡ್ಡ ವ್ಯಂಗ್ಯ: ಬಿಜೆಪಿ ಟೀಕೆ