ನವದೆಹಲಿ: ಪಂಚರಾಜ್ಯ ಚುನಾವಣೆಗಳಲ್ಲಿ ಹೀನಾಯವಾಗಿ ಸೋಲು ಕಂಡಿರುವ ಕಾಂಗ್ರೆಸ್ ಇಂದು ಕಾರ್ಯಕಾರಿ ಸಮಿತಿ ಸಭೆ(CWC) ನಡೆಸಲು ಮುಂದಾಗಿದೆ. 2024ರ ಲೋಕಸಭೆ ಚುನಾವಣೆ ಸೇರಿದಂತೆ ಪಕ್ಷದ ನಾಯಕತ್ವದ ವಿಚಾರವಾಗಿ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಉತ್ತರ ಪ್ರದೇಶ, ಪಂಜಾಬ್, ಗೋವಾ, ಮಣಿಪುರ ಹಾಗೂ ಉತ್ತರಾಖಂಡದಲ್ಲಿ ಕಾಂಗ್ರೆಸ್ ಪಕ್ಷ ಮುಖಭಂಗಕ್ಕೊಳಗಾಗಿದೆ. ಈ ಬೆನ್ನಲ್ಲೇ ನಾಯಕತ್ವದ ಬಗ್ಗೆ ಮತ್ತೊಮ್ಮೆ ಪ್ರಶ್ನೆ ಉಂಟಾಗಿದ್ದು, ಇಂದು ನಡೆಯಲಿರುವ ಕಾರ್ಯಾರಿ ಸಮಿತಿ ಸಭೆ ಮಹತ್ವ ಪಡೆದುಕೊಂಡಿದೆ. ಈ ವೇಳೆ ಐದು ರಾಜ್ಯಗಳಲ್ಲಿ ಪಕ್ಷದ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲು ಮುಂದಾಗಿದ್ದು, ಪಕ್ಷದಲ್ಲಿನ ನಾಯಕತ್ವದ ಬಗ್ಗೆ ಚರ್ಚೆ ನಡೆಯಲಿದೆ. ಭಾನುವಾರ ಸಂಜೆ 4 ಗಂಟೆಗೆ ಈ ಸಭೆ ಆರಂಭಗೊಳ್ಳಲಿದೆ.
ಇದನ್ನೂ ಓದಿ: ಸತತ ಸೋಲು ಗಂಭೀರವಾದ ವಿಚಾರ : ಜಿ-23 ಸಭೆಯಲ್ಲಿ ಕಾಂಗ್ರೆಸ್ ನಾಯಕರ ಅಭಿಪ್ರಾಯ
ಸಭೆಯಲ್ಲಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಮುಖಂಡ ರಾಹುಲ್ ಗಾಂಧಿ, ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿ ಪ್ರಿಯಾಂಕಾ ಗಾಂಧಿ, ಹಿರಿಯ ಮುಖಂಡ ಮಲ್ಲಿಕಾರ್ಜುನ್ ಖರ್ಗೆ, ಪಿ.ಚಿದಂಬರಂ ಸೇರಿದಂತೆ G-23ಯ ಪ್ರಮುಖ ಮುಖಂಡರು ಭಾಗಿಯಾಗುವ ಸಾಧ್ಯತೆ ಇದೆ.
ಹೀನಾಯ ಸೋಲಿನ ಬೆನ್ನಲ್ಲೇ ಶುಕ್ರವಾರ ರಾತ್ರಿ ಕಾಂಗ್ರೆಸ್ ಪಕ್ಷದ ಭಿನ್ನಮತೀಯ ನಾಯಕರು ಸಭೆ ನಡೆಸಿದ್ದು, ಇದರಲ್ಲಿ ಗುಲಾಂ ನಬಿ ಆಜಾದ್, ಮನೀಷ್ ತಿವಾರಿ ಹಾಗೂ ಆನಂದ್ ಶರ್ಮಾ ಇದ್ದರು.