ನವದೆಹಲಿ: ಮುಂಬರುವ ಹಬ್ಬ ಹರಿದಿನಗಳಲ್ಲಿ ಪ್ರಯಾಣಿಸಲು ಶೇ 46 ರಷ್ಟು ನಾಗರಿಕರು ಎದುರು ನೋಡುತ್ತಿದ್ದಾರೆ ಎಂದು ಸಮೀಕ್ಷೆಯೊಂದು ಕಂಡು ಕೊಂಡಿದೆ. ಕೊರೊನಾ ಸಾಂಕ್ರಾಮಿಕ ರೋಗದ ಮೂರನೇ ತರಂಗದ ಭೀತಿಯ ಮಧ್ಯೆ ಪ್ರಯಾಣ ಕಡಿತಗೊಳಿಸುವುದು ಅಗತ್ಯ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಅಭಿಪ್ರಾಯಪಟ್ಟಿದೆ.
ಸಮೀಕ್ಷೆಯನ್ನು ಸಂಕಲಿಸಿದ ಲೋಕಲ್ ಸರ್ಕಲ್ಸ್‌ನ ಸಂಸ್ಥಾಪಕ ಸಚಿನ್ ತಪರಿಯಾ ಈಟಿವಿ ಭಾರತ್ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದು, "ಮುಂಬರುವ ತಿಂಗಳುಗಳಲ್ಲಿ ಅನೇಕ ಹಬ್ಬಗಳು ಸಾಲುಗಟ್ಟಿರುವುದರಿಂದ, ಆಗಸ್ಟ್ ನಿಂದ ಸೆಪ್ಟೆಂಬರ್ಗೆ ಹೋಲಿಸಿದರೆ ಈ ಮುಂಬರುವ ದಿನಗಳಲ್ಲಿ ಪ್ರಯಾಣಿಸುವ ನಾಗರಿಕರಲ್ಲಿ ಶೇ 60 ರಷ್ಟು ಏರಿಕೆ ಕಾಣುವ ಸಾಧ್ಯತೆಯಿದೆ" ಎಂದಿದ್ದಾರೆ.
ಅಕ್ಟೋಬರ್-ಡಿಸೆಂಬರ್‌ನಲ್ಲಿ ಪ್ರಯಾಣಿಸಲು ಯೋಜಿಸುವವರಲ್ಲಿ, ಶೇ 34 ರಷ್ಟು ಜನರು ಕುಟುಂಬ ಮತ್ತು ಸ್ನೇಹಿತರನ್ನು ಭೇಟಿ ಮಾಡಲು ಯೋಜಿಸಿದ್ದಾರೆ ಎಂದು ಸಮೀಕ್ಷೆಯಲ್ಲಿ ಕಂಡು ಬಂದಿದೆ.
ಲೋಕಲ್ ಸರ್ಕಲ್ಸ್, ಪ್ರಮುಖ ಸಮುದಾಯ ಸಾಮಾಜಿಕ ಮಾಧ್ಯಮ ವೇದಿಕೆ, ಅಕ್ಟೋಬರ್ನಿಂದ ಡಿಸೆಂಬರ್ (ಹಬ್ಬದ ಸಮಯದಲ್ಲಿ) ಜನರ ಪ್ರಯಾಣ ಯೋಜನೆಗಳನ್ನು ಅರ್ಥಮಾಡಿಕೊಳ್ಳಲು ಸಮೀಕ್ಷೆಯನ್ನು ನಡೆಸಲಾಯಿತು. ಸಮೀಕ್ಷೆಯು ಭಾರತದಾದ್ಯಂತ 331 ಜಿಲ್ಲೆಗಳಲ್ಲಿ ವಾಸಿಸುವ ನಾಗರಿಕರಿಂದ 19,000 ಕ್ಕೂ ಹೆಚ್ಚು ಪ್ರತಿಕ್ರಿಯೆಗಳನ್ನ ಪಡೆಯಲಾಗಿದೆ.
ಶೇ 6 ರಷ್ಟು ನಾಗರಿಕರು ತಾವು ಪ್ರಯಾಣಿಸಲು ಟಿಕೆಟ್ ಕಾಯ್ದಿರಿಸಿದ್ದೇವೆ ಎಂದು ಹೇಳಿದರು. ಶೇ 22 ರಷ್ಟು ಜನರು ಈ ಮೂರು ತಿಂಗಳಲ್ಲಿ ಪ್ರಯಾಣಿಸಲು ಯೋಜಿಸಿದ್ದಾರೆ. ಆದರೆ ಟಿಕೆಟ್ ಬುಕ್ ಮಾಡಿಲ್ಲ. ಆದರೆ, ಶೇ 18 ಜನರು ಮೂರು ತಿಂಗಳಲ್ಲಿ ಪ್ರಯಾಣಿಸಲು ಮತ್ತು ಅವರ ಟಿಕೆಟ್ ಕಾಯ್ದಿರಿಸಲು ಹತ್ತಿರದಲ್ಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ.
ಒಟ್ಟಾರೆ, ಶೇ 46 ರಷ್ಟು ನಾಗರಿಕರು ಅಕ್ಟೋಬರ್ನಿಂದ ಡಿಸೆಂಬರ್ ಅವಧಿಯಲ್ಲಿ ಪ್ರಯಾಣಿಸಲು ಯೋಜಿಸುತ್ತಿದ್ದರೂ ಶೇ 6 ರಷ್ಟು ಜನರು ಮಾತ್ರ ಬುಕಿಂಗ್ ಮಾಡಿದ್ದಾರೆ ಎಂದು ಸಮೀಕ್ಷೆ ಹೇಳಿದೆ.