ಚಂಡೀಗಢ(ಪಂಜಾಬ್): ಪ್ರಪಂಚದಲ್ಲೇ ಸಿಖ್ ಸಮುದಾಯದ ಅತಿ ಎತ್ತರದ ವ್ಯಕ್ತಿ ಎಂದೇ ಹೆಸರು ಮಾಡಿರುವ ಮಾಜಿ ಪೊಲೀಸ್ ಕಾನ್ಸ್ಟೆಬಲ್ ಜಗದೀಪ್ ಸಿಂಗ್ ಅಲಿಯಾಸ್ ದೀಪ್ ಸಿಂಗ್ ಎಂಬಾತ ಹೆರಾಯಿನ್‌ಸಮೇತವಾಗಿ ಪಂಜಾಬ್ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಈ ಹಿಂದೆ ಅಮೆರಿಕದ ರಿಯಾಲಿಟಿ ಶೋನಲ್ಲೂ ಪಾಲ್ಗೊಂಡಿದ್ದ ಜಗದೀಪ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದರು.
ತರನ್ ತರನ್ ಜಿಲ್ಲೆಯಲ್ಲಿ ಜಗದೀಪ್ ಸಿಂಗ್ ತನ್ನಿಬ್ಬರು ಸಹಚರರೊಂದಿಗೆ ಬೊಲೆರೋ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ, ರಾಜ್ಯ ಪೊಲೀಸ್ ಇಲಾಖೆಯ ವಿಶೇಷ ಕಾರ್ಯಾಚರಣೆ ಪಡೆಯು ಕಾರು ತಡೆದು ತಪಾಸಣೆ ನಡೆಸಿದ್ದು, 500 ಗ್ರಾಂ ಹೆರಾಯಿನ್ ಪತ್ತೆಯಾಗಿದೆ. ಆದ್ದರಿಂದ ದೀಪ್ ಸಿಂಗ್ ಸೇರಿದಂತೆ ಮೂವರನ್ನೂ ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಅತಿ ಎತ್ತರದ ತಮ್ಮ ಎತ್ತರದ ಮೂಲಕವೇ ಹೆಸರು ಮಾಡಿದ್ದ ಜಗದೀಪ್ ಸಿಂಗ್ ಈ ಹಿಂದೆ ಪಂಜಾಬ್ ಪೊಲೀಸ್ ಇಲಾಖೆಗೆ ಸೇರಿದ್ದರು. ಆದರೆ, ಕೆಲ ವರ್ಷಗಳ ಬಳಿಕ ಕೌಟುಂಬಿಕ ಕಾರಣ ನೀಡಿ ಪೊಲೀಸ್ ಕೆಲಸ ತೊರೆದಿದ್ದರು. ಮತ್ತೊಂದೆಡೆ, ಅಮೆರಿಕಾಸ್ ಗಾಟ್ ಟ್ಯಾಲೆಂಟ್ ಎಂಬ ರಿಯಾಲಿಟಿ ಶೋನಲ್ಲಿ ಹಲವು ಬಾರಿ ಭಾಗವಹಿಸಿದ್ದರು. ಇಂದು ಪೊಲೀಸ್ ಕಾರ್ಯಾಚರಣೆ ವೇಳೆ ಆರೋಪಿ ತನ್ನ ಕಾರಿನ ಮೇಲೆ ಇನ್ನೂ ಪಂಜಾಬ್ ಪೊಲೀಸ್ ಇಲಾಖೆಯ ಸ್ಟಿಕ್ಕರ್ ಅಂಟಿಸಿದ್ದರು. ಕೆಲ ದಿನಗಳಲ್ಲಿ ಅವರು ಮತ್ತೆ ಅಮೆರಿಕಕ್ಕೆ ಹೋಗಲು ಸಿದ್ಧರಾಗಿದ್ದರು ಎಂದು ತಿಳಿದು ಬಂದಿದೆ.
ಪೊಲೀಸ್ ಬಲೆಗೆ ಬಿದ್ದಿದ್ದು ಹೇಗೆ?: ಗಡಿಯಾಚೆಯಿಂದ ಹೆರಾಯಿನ್ ಸಾಗಾಟದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಅಂತೆಯೇ, ಗಡಿ ಪ್ರದೇಶದಲ್ಲಿ ಪೊಲೀಸರು ವಾಹನ ತಪಾಸಣೆಗೆ ನಿಂತಿದ್ದರು. ಈ ವೇಳೆ, ಜಗದೀಪ್ ಸಿಂಗ್ ಕಾರು ಚಲಾಯಿಸಿಕೊಂಡು ಬಂದಿದ್ದಾರೆ. ಆಗ ಪೊಲೀಸ್ ಸಿಬ್ಬಂದಿ ಕಾರು ತಪಾಸಣೆ ನಡೆಸಿದಾಗ ಹೆರಾಯಿನ್ ದೊರೆತಿದೆ. ಅಲ್ಲದೇ, ಈತ ತಾನು ಮಾಜಿ ಪೊಲೀಸ್ ಎಂಬುದನ್ನೇ ದುರುಪಯೋಗಪಡಿಸಿಕೊಂಡು ಮಾದಕದ್ರವ್ಯ ಸಾಗಣೆಯಲ್ಲಿ ತೊಡಗಿದ್ದ ಎಂದು ಹೇಳಲಾಗಿದೆ.
ಪೊಲೀಸ್ ಇಲಾಖೆಯಲ್ಲಿ ತನ್ನ ಎತ್ತರದಿಂದಲೇ ಗುರುತಿಸಿಕೊಂಡಿದ ಜಗದೀಪ್, ಮಾಜಿ ಕಾನ್ಸ್ಟೆಬಲ್ ಅನ್ನೋ ಕಾರಣಕ್ಕೆ ಸಿಬ್ಬಂದಿ ಹೆಚ್ಚು ಪ್ರಶ್ನಿಸುತ್ತಿರಲಿಲ್ಲ. ಕಾರಿನ ಮೇಲೆ ಪಂಜಾಬ್ ಪೊಲೀಸ್ ಸ್ಟಿಕ್ಕರ್ ಅಂಟಿಸಿಕೊಂಡು ಓಡಾಡುತ್ತಿದ್ದ. ಇದರಿಂದ ತಾನು ಮುಂದೊಂದು ದಿನ ಖಂಡಿತವಾಗಿಯೂ ಸಿಕ್ಕಿಬೀಳುತ್ತಾನೆ ಎಂದೂ ಊಹೆ ಮಾಡಿರಲಿಲ್ಲ. ಆದರೆ, ಈಗ ಹೆರಾಯಿನ್‌ಸಮೇತವಾಗಿ ಪೊಲೀಸರು ಖೆಡ್ಡಾಕ್ಕೆ ಕೆಡವಿದ್ದಾರೆ. ಸದ್ಯ ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಹೆಚ್ಚಿನ ತನಿಖೆಗಾಗಿ ಕಸ್ಟಡಿಗೆ ಪಡೆಯಲು ಪೊಲೀಸರು ಮುಂದಾಗಿದ್ದಾರೆ.
ಇದನ್ನೂ ಓದಿ: ಭಾರತ್- ಪಾಕ್ ಗಡಿಯಲ್ಲಿ 40 ಕಿ.ಮೀ ಬೆನ್ನಟ್ಟಿ ಡ್ರಗ್ಸ್ ಕಳ್ಳಸಾಗಣೆದಾರನ ಹಿಡಿದ ಪೊಲೀಸರು