ಪಾಟ್ನಾ(ಬಿಹಾರ): ಆಂಬ್ಯುಲೆನ್ಸ್ ಬಾರದ ಕಾರಣ ತರಕಾರಿ ಮಾರುವ ತಳ್ಳು ಗಾಡಿಯಲ್ಲೇ ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಸಾಗಿಸಿರುವ ದಯನೀಯ ಘಟನೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ತವರು ಜಿಲ್ಲೆ ನಳಂದಾದಲ್ಲಿ ಶನಿವಾರ ನಡೆದಿದೆ.
ಬಿಹಾರ್ ಶರೀಫ್ನ ಕಮ್ರುದ್ದೀನ್ ಗಂಜ್ ನಿವಾಸಿ ರಾಜೀವ್ ಪ್ರಸಾದ ಎಂಬುವರು ಗರ್ಭಿಣಿ ಪತ್ನಿಯನ್ನು ತಳ್ಳು ಗಾಡಿಯಲ್ಲಿ ಆಸ್ಪತ್ರೆಗೆ ಸೇರಿಸಿದ ವ್ಯಕ್ತಿಯಾಗಿದ್ದಾರೆ. 'ನಾನು ಆಸ್ಪತ್ರೆಯ ಉಚಿತ ಕರೆ ನಂಬರ್ಗೆ ಪದೇ ಪದೇ ಕರೆ ಮಾಡಿ ಆಂಬ್ಯುಲೆನ್ಸ್ ಕಳುಹಿಸುವಂತೆ ಮನವಿ ಮಾಡಿದೆ. ಆದರೆ ಅವರು ನನ್ನ ಮನವಿಯನ್ನು ತಿರಸ್ಕರಿಸಿದರು. ಹೀಗಾಗಿ ಅನಿವಾರ್ಯವಾಗಿ ತರಕಾರಿ ಗಾಡಿಯಲ್ಲಿ ಪತ್ನಿಯನ್ನು ಕರೆದುಕೊಂಡು ಹೋಗಬೇಕಾಯಿತು. ಅಷ್ಟೇ ಅಲ್ಲದೆ ಆಸ್ಪತ್ರೆಗೆ ಹೋದ ನಂತರ ಸ್ಟ್ರೆಚರ್ ನೀಡಲು ಸಹ ಅಲ್ಲಿನ ಸಿಬ್ಬಂದಿ ನಿರಾಕರಿಸಿದರು. ಹೀಗಾಗಿ ಗಾಡಿಯನ್ನೇ ಎಮರ್ಜೆನ್ಸಿ ವಾರ್ಡ್ವರೆಗೆ ತೆಗೆದುಕೊಂಡು ಹೋದೆ' ಎಂದು ರಾಜೀವ್ ಪ್ರಸಾದ್ ಆರೋಪಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಗಳು ಆಂಬ್ಯುಲೆನ್ಸ್ ನೀಡಲು ನಿರಾಕರಿಸುವುದರಿಂದ ಜನರು ಮೃತ ದೇಹಗಳನ್ನು ಹೆಗಲ ಮೇಲೆ, ಸೈಕಲ್‌ಗಳಲ್ಲಿ ಸಾಗಿಸುವ ಪರಿಸ್ಥಿತಿ ಬಿಹಾರದಲ್ಲಿ ಸಾಮಾನ್ಯವಾಗಿದೆ. ಆದ್ರೆ ಈ ಪ್ರಕರಣದಲ್ಲಿ ಜೀವಂತ ಇರುವ ಗರ್ಭಿಣಿಯನ್ನು ಕರೆದೊಯ್ಯಲು ಆಂಬ್ಯುಲೆನ್ಸ್ ಬರದಿರುವುದು ವಿಪರ್ಯಾಸವೇ ಸರಿ.
ಇಂಥ ಸಮಸ್ಯೆಗಳ ನಿವಾರಣೆಗಾಗಿ ಬಿಹಾರದ ಆರೋಗ್ಯ ಸಚಿವ ತೇಜಸ್ವಿ ಯಾದವ್ ಅವರು ಪ್ರತಿ ಜಿಲ್ಲಾ ಆಸ್ಪತ್ರೆಗೆ ಹಾಸಿಗೆ, ಸ್ಟ್ರೆಚರ್‌ಗಳು, ಆಂಬ್ಯುಲೆನ್ಸ್, ಆಮ್ಲಜನಕ ಸಿಲಿಂಡರ್, ಔಷಧಿ, ಮತ್ತು ಇತರ ಸಾಧನಗಳನ್ನು ಉಚಿತವಾಗಿ ಒದಗಿಸಲು ಮಿಷನ್ 60 ಯೋಜನೆಯನ್ನು ಪ್ರಾರಂಭಿಸಿದ್ದರು.
ಇದನ್ನೂ ಓದಿ: ಅಪಹರಣ ಪ್ರಕರಣದ ಆರೋಪಿಗೆ ಬಿಹಾರದ ನಿತೀಶ್ ಸಂಪುಟದಲ್ಲಿ ಕಾನೂನು ಸಚಿವ ಸ್ಥಾನ