ಕೊರ್ಬಾ(ಛತ್ತೀಸ್ಗಢ): ಛತ್ತೀಸ್ಗಢ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳ ಹಣದ ದಾಹಕ್ಕೆ 3 ವರ್ಷದಲ್ಲಿ 3 ಸಾವಿರಕ್ಕೂ ಅಧಿಕ ಬುಡಕಟ್ಟು ಸಮುದಾಯದ ಮಹಿಳೆಯರು ಅಸುನೀಗಿರುವ ಆರೋಪ ಪ್ರಕರಣ ಬೆಳಕಿಗೆ ಬಂದಿದೆ.
ಕೊರ್ವಾ ಸಮುದಾಯದ ಜನರೇ ಇದರಲ್ಲಿ ಅಧಿಕವಾಗಿದ್ದು, ರಾಜ್ಯದಲ್ಲಿ ಆರೋಗ್ಯ ವ್ಯವಸ್ಥೆ ಹದಗೆಟ್ಟಿದೆ ಎಂಬುದನ್ನು ಈ ಪ್ರಕರಣಗಳು ದೃಢಪಡಿಸುತ್ತಿವೆ. ಇತ್ತೀಚೆಗೆ ಕೊರ್ವಾ ಸಮುದಾದಯದ ಮಹಿಳೆಯೋರ್ವಳು ಕೈ ಮುರಿದುಕೊಂಡು ಸರ್ಕಾರಿ ಆಸ್ಪತ್ರೆ ಸೇರಿದ್ದರು. ಬಳಿಕ ಅಲ್ಲಿ ಉತ್ತಮ ಚಿಕಿತ್ಸೆ ಇಲ್ಲವೆಂದು ಹೇಳಿ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಸ್ತ್ರಚಿಕಿತ್ಸೆ ಹೆಸರಿನಲ್ಲಿ ಆಕೆಗೆ ಮೂರು ದಿನ ಅನ್ನ, ನೀರು ಕೊಡದ ಕಾರಣ ಆ ಮಹಿಳೆ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ. ಇದು ಅಲ್ಲಿಯ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ, ಹೀಗೆ ಸರ್ಕಾರಿ ಆಸ್ಪತ್ರೆಗಳಿಂದ ಖಾಸಗಿ ಆಸ್ಪತ್ರೆಗಳಿಗೆ ಕಳೆದ 3 ವರ್ಷದ ಅವಧಿಯಲ್ಲಿ ದಾಖಲಾದ 3 ಸಾವಿರಕ್ಕೂ ಅಧಿಕ ಬುಡಕಟ್ಟು ಮಹಿಳೆಯರ ಪ್ರಾಣ ಪಕ್ಷಿ ಹಾರಿಹೋಗಿರುವುದು ಬೆಳಕಿಗೆ ಬಂದಿದೆ ಎಂದು ಬುಡಕಟ್ಟು ಇಲಾಖೆ ಮಾಹಿತಿ ನೀಡಿದೆ.
ಛತ್ತೀಸ್ಗಢದ ಬಾಲ್ರಾಂಪುರ್, ಬಸ್ತಾರ್, ಬಿಜಾಪುರ, ದಂಥೇವಾಡ, ಜಸ್ಪುರ್, ಕಂಕರ್, ಕೊಂಡಗಾಂವ್, ಕೊರ್ಬಾ, ನಾರಾಯಣಪುರ, ಸುಕ್ಮಾ, ಸುರ್ಜಾಪುರ ಮತ್ತು ಸುರ್ಗುಂಜದಲ್ಲಿ 3,112 ಬುಡಕಟ್ಟು ಮಹಿಳೆಯರು ಮೃತಪಟ್ಟಿದ್ದಾರೆ. ಇದರಲ್ಲಿ 955 ಗರ್ಭಿಣಿಯರೇ ಮೃತಪಟ್ಟಿರುವುದು ಆತಂಕದ ಸಂಗತಿ.
ಕಮಿಷನ್ಗಾಗಿ ಪ್ರಾಣದ ಜೊತೆ ಚೆಲ್ಲಾಟ ಆರೋಪ: ಅನಾರೋಗ್ಯವೆಂದು ಸರ್ಕಾರಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳಲ್ಲಿ 'ಉತ್ತಮ ಚಿಕಿತ್ಸೆಯ' ಭಯ ಹುಟ್ಟಿಸಿ ಅವರನ್ನು ಖಾಸಗಿ ಆಸ್ಪತ್ರೆಗೆ ಹೋಗುವಂತೆ ಮಾಡಲಾಗುತ್ತಿದೆ. ಇದರಲ್ಲಿ ಆಟೋ ಚಾಲಕರು, ಆಸ್ಪತ್ರೆಯ ವಾರ್ಡ್ ಸಿಬ್ಬಂದಿಯಲ್ಲದೇ ಸರ್ಕಾರಿ ವೈದ್ಯರು ಕೂಡ ಈ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗ್ತಿದೆ. ಇವರೆಲ್ಲರಿಗೂ ಕಮಿಷನ್ ಫಿಕ್ಸ್ ಮಾಡಲಾಗಿದ್ದು, ಇದಕ್ಕಾಗಿ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಸೇರುವಂತೆ ಶಿಫಾರಸು ಮಾಡಿ ಪ್ರಾಣಗಳ ಜೊತೆ ಚೆಲ್ಲಾಟವಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ಅರಣ್ಯ ಪ್ರದೇಶದ ಜನರಿಗೆ ಸಿಕ್ತಿಲ್ಲ ಚಿಕಿತ್ಸೆ: ಇಲ್ಲಿನ ವನಾಂಚಲ್ ಅರಣ್ಯ ಪ್ರದೇಶದ ಜನರಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಲಭ್ಯವಾಗುತ್ತಿಲ್ಲ. ಅಲ್ಲದೇ, ಇಲ್ಲಿ 22 ಖಾಸಗಿ ಆಸ್ಪತ್ರೆಗಳು ಪರವಾನಗಿ ಇಲ್ಲದೆಯೇ ನಡೆಯುತ್ತಿವೆ. ಇವರಿಗೆ ಯಾವುದೇ ವೈದ್ಯ ತರಬೇತಿ ಇಲ್ಲದಿದ್ದರೂ ಚಿಕಿತ್ಸೆ ನೀಡಲಾಗುತ್ತಿದೆ. ಇದು ರೋಗಿಗಳ ಪ್ರಾಣಕ್ಕೆ ಕುತ್ತಾಗಿ ಪರಿಣಮಿಸಿದೆ ಎಂದು ಮೂಲಗಳು ತಿಳಿಸಿವೆ.
ಓದಿ: ತಮಿಳುನಾಡು ಸ್ಥಳೀಯ ಸಂಸ್ಥೆ ಚುನಾವಣೆ: ನಟ ವಿಜಯ್ ಸೇರಿ ಪ್ರಮುಖರಿಂದ ಮತದಾನ