ತಿರುಪತಿ (ಆಂಧ್ರಪ್ರದೇಶ): ಕೊರೊನಾ ಸೋಂಕು ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿರುವ ಕಾರಣ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಾಣುತ್ತಿದೆ. ಅಲ್ಲದೆ, ಆನ್‌ಲೈನ್‌ನಲ್ಲಿ ದರ್ಶನ ಟಿಕೆಟ್‌ಗಳನ್ನು ಖರೀದಿಸಿದ ಇತರ ರಾಜ್ಯಗಳ ಹೆಚ್ಚಿನ ಭಕ್ತರು ತಮ್ಮ ಯೋಜನೆಗಳನ್ನು ಕೈ ಬಿಟ್ಟಿದ್ದಾರೆ.
20 ರಿಂದ 25 ಸಾವಿರ ಭಕ್ತರು ಆನ್‌ಲೈನ್‌ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಈ ಪರಿಸ್ಥಿತಿ ಪರಿಶೀಲಿಸಿದ ಟಿಟಿಡಿ ವಿಷ್ಣು ನಿವಾಸ ಹಾಗೂ ಭೂದೇವಿ ಕಾಂಪ್ಲೆಕ್ಸ್‌ನಲ್ಲಿರುವ ಸರ್ವದರ್ಶನ ಟೋಕನ್ ಕೇಂದ್ರಗಳನ್ನು ಮುಚ್ಚಿದೆ.
ಈ ನಡುವೆ 300 ರೂ. ವಿಶೇಷ ದರ್ಶನ ಟಿಕೆಟ್ ಖರೀದಿಸಿದ ಜನರಿಗೆ ಮಾತ್ರ ಅವಕಾಶ ನೀಡಲಾಗುತ್ತಿದ್ದು, ಮೇ ತಿಂಗಳಿನಿಂದ ಪ್ರತಿದಿನ ಕೇವಲ 15 ಸಾವಿರ ಪ್ರವಾಸಿಗರಿಗೆ ಮಾತ್ರ ಅವಕಾಶ ನೀಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅದಕ್ಕಾಗಿ ಏಪ್ರಿಲ್ 20 ರಂದು ಟಿಕೆಟ್ ಬಿಡುಗಡೆ ಮಾಡಲಾಗುವುದು.
ಆಂಧ್ರಪ್ರದೇಶದಲ್ಲಿ ಕೊರೊನಾ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿದ್ದು, ಚಿತ್ತೂರು ಜಿಲ್ಲೆಯು ಹೆಚ್ಚಿನ ಕೊರೊನಾ ಪ್ರಕರಣಗಳಿಗೆ ಸಾಕ್ಷಿಯಾಗಿದೆ. ತಿರುಪತಿಯಲ್ಲೂ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ, ಟಿಟಿಡಿಯನ್ನು ರಾಜ್ಯ ಆಡಳಿತವು ಎಚ್ಚರವಾಗಿರಲು ಕೇಳಿದೆ.
ಬಾಲಾಜಿ ದರ್ಶನಕ್ಕೆ ಬರುವ ಯಾತ್ರಾರ್ಥಿಗಳು ಎಲ್ಲ ಕೋವಿಡ್ ಮುನ್ನೆಚ್ಚರಿಕೆಗಳನ್ನು ಅನುಸರಿಸಿ ಆಗಮಿಸಲು ಟಿಟಿಡಿ ವಿನಂತಿಸಿದೆ. ಆರೋಗ್ಯ ಸಮಸ್ಯೆಗಳಿರುವವರು ತಿರುಮಲಕ್ಕೆ ಭೇಟಿ ನೀಡದಂತೆ ಸಲಹೆ ನೀಡಿದೆ.
ಅಲಿಪಿರಿ ಚೆಕ್‌ಪಾಯಿಂಟ್‌ನಲ್ಲಿ ಪರೀಕ್ಷಿಸಿದ ನಂತರವೇ ಭಕ್ತರಿಗೆ ಒಳಕ್ಕೆ ಅವಕಾಶವಿದ್ದು, ಅವರ ವಾಹನಗಳನ್ನು ಸಂಪೂರ್ಣವಾಗಿ ಸ್ವಚ್ಚಗೊಳಿಸಲಾಗುತ್ತದೆ. ಧಾರ್ಮಿಕ ಸಂಕೀರ್ಣ, ಕಲ್ಯಾಣಕತ್ತ ಮತ್ತು ಅನ್ನಪ್ರಸಾದಂನಲ್ಲಿ ಸಾಮಾಜಿಕ ದೂರವನ್ನು ಕಾಯ್ದುಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದೆ. ವೈಕುಂಠಂ ಕ್ಯೂ ಕಾಂಪ್ಲೆಕ್ಸ್‌ನಲ್ಲಿನ ಜನ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಸಮಯಕ್ಕೆ ಸರಿಯಾಗಿ ಯಾತ್ರಾರ್ಥಿಗಳು ಆಗಮಿಸುವಂತೆ ಅಧಿಕಾರಿಗಳು ಕೋರಿಕೊಂಡಿದ್ದಾರೆ.
ಇನ್ನು ಟಿಟಿಡಿಗೆ ಭೇಟಿ ನೀಡುವ ಭಕ್ತರು ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳ ಅನುಷ್ಠಾನ ಹಾಗೂ ದರ್ಶನಕ್ಕೆ ಅನುಕೂಲ ಮಾಡಿಕೊಡುತ್ತಿರುವ ವಿಧಾನದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ.