ನವದೆಹಲಿ: ದೇಶದ ಪ್ರತಿಷ್ಠಿತ ಆಯಿಲ್ ಮತ್ತು ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ (ONGC)ಗೆ ಅಲ್ಕಾ ಮಿತ್ತಲ್ ಅವರನ್ನು ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ (CMD) ನೇಮಕ ಮಾಡಲಾಗಿದೆ. ಕಂಪನಿಯ ಮಾನವ ಸಂಪನ್ಮೂಲ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಅಲ್ಕಾ ಮಿತ್ತಲ್ ಅವರು ಈಗ ಕಂಪನಿಯ ಸಿಎಂಡಿ ಆಗಿ ನೇಮಕ ಮಾಡಲಾಗಿದೆ.
ಈ ಮೂಲಕ ಕಂಪನಿಯಲ್ಲಿ ಅಧಿಕಾರ ವಹಿಸಿಕೊಂಡ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಮಿತ್ತಲ್ ಪಾತ್ರರಾಗಿದ್ದಾರೆ. ONGC ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಮಿತ್ತಲ್ ಅವರ ನೇಮಕವನ್ನ ದೃಢಪಡಿಸಿದೆ.
ಒಎನ್‌ಜಿಸಿ ನಿರ್ದೇಶಕ (ಎಚ್‌ಆರ್) ಡಾ ಅಲ್ಕಾ ಮಿತ್ತಲ್ ಅವರಿಗೆ ಒಎನ್‌ಜಿಸಿ ಸಿಎಂಡಿಯ ಹೆಚ್ಚುವರಿ ಉಸ್ತುವಾರಿ ವಹಿಸಲಾಗಿದೆ. ಅವರು ಇಂಧನ ದೈತ್ಯ ಕಂಪನಿಯ ಮೊದಲ ಮಹಿಳಾ ಮುಖ್ಯಸ್ಥರಾಗಿದ್ದಾರೆ ಎಂದು ಕಂಪನಿ ತನ್ನ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದೆ.
ಅಲ್ಕಾ ಮಿತ್ತಲ್ ಒಎನ್‌ಜಿಸಿ ಮಂಡಳಿಯಲ್ಲಿ ಅತ್ಯಂತ ಹಿರಿಯ ನಿರ್ದೇಶಕರಾಗಿದ್ದರು. ಇನ್ನು ಒಎನ್‌ಜಿಸಿಯ ಹಣಕಾಸು ನಿರ್ದೇಶಕರಾಗಿದ್ದ ಸುಭಾಷ್‌ಕುಮಾರ್ ಅವರು ಕಳೆದ ವರ್ಷ ಏಪ್ರಿಲ್‌ನಿಂದ ಸಿಎಂಡಿ ಆಗಿ ಹೆಚ್ಚುವರಿ ಹೊಣೆ ಹೊತ್ತಿದ್ದರು.
ಈ ಹಿಂದೆ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಜನವರಿ 1, 2022 ರಿಂದ ಜಾರಿಗೆ ಬರುವಂತೆ ನಿರ್ದೇಶಕ (ಹಣಕಾಸು) ಹುದ್ದೆಯ ಹೆಚ್ಚುವರಿ ಹೊಣೆಗಾರಿಕೆಯೊಂದಿಗೆ ನಿರ್ದೇಶಕ (ಆನ್‌ಶೋರ್) ಅನುರಾಗ್ ಶರ್ಮಾ ಅವರಿಗೆ ಅಧಿಕಾರ ನೀಡಿ ಆದೇಶ ಮಾಡಿತ್ತು.
ಈ ಮೊದಲು ಕಂಪನಿಯ ಮುಖ್ಯಸ್ಥರಾಗಿದ್ದ ಶಶಿ ಶಂಕರ್ ಅವರು ಮಾರ್ಚ್ 31, 2021 ರಂದು ನಿವೃತ್ತರಾಗಿದ್ದರು. ಅವರ ನಿವೃತ್ತಿ ಬಳಿಕ ಖಾಯಂ ಮುಖ್ಯಸ್ಥರ ನೇಮಕ ಮಾಡಲಾಗಿರಲಿಲ್ಲ. ಬದಲಿಗೆ ಮಂಡಳಿಯಲ್ಲಿ ಅತ್ಯಂತ ಹಿರಿಯ ನಿರ್ದೇಶಕರಾಗಿದ್ದ ಕುಮಾರ್ ಅವರಿಗೆ ಹೆಚ್ಚುವರಿ ಹೊಣೆ ನೀಡಲಾಗಿತ್ತು. ಇದೀಗ ಸರ್ಕಾರ, ಸಿಎಂಡಿ ಆಗಿ ಅಲ್ಕಾ ಮಿತ್ತಲ್ ಅವರನ್ನು ನೇಮಕ ಮಾಡಿ ಆದೇಶ ಮಾಡಿದೆ.
ಇದನ್ನೂ ಓದಿ:ಬೆಂಗಳೂರಿನ ಈ ಮಾರ್ಗಗಳಲ್ಲೂ ಇನ್ಮೇಲೆ 'ವಾಯು ವಜ್ರ' ಸೇವೆ ಲಭ್ಯ..