ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗ ಹರಡಿರುವ ಈ ಮಧ್ಯೆ ಹೆಣಗಾಡುತ್ತಿರುವ ಕಲಾವಿದರಿಗೆ ಸಹಾಯ ಹಸ್ತ ಚಾಚುವ ನಿಟ್ಟಿನಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ 50 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಅಂಗಸಂಸ್ಥೆ ಸಂಸ್ಕಾರ ಭಾರತಿ ಗುರುವಾರ ಈ ಮಾಹಿತಿಯನ್ನು ಹಂಚಿಕೊಂಡಿದೆ.
ಖ್ಯಾತ ಪ್ಲೇಬ್ಯಾಕ್ ಧ್ವನಿ ಕಲಾವಿದ ಹರೀಶ್ ಭೀಮಾನಿ ಸಹ 5 ಲಕ್ಷ ರೂಪಾಯಿಗಳನ್ನು ಅಗತ್ಯವಿರುವ ಕಲಾವಿದರಿಗೆ ಸಹಾಯ ಮಾಡಲು ನೀಡಿದ್ದಾರೆ ಎಂದು ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಸಾಂಕ್ರಾಮಿಕ ರೋಗದಿಂದ ಸಂಕಷ್ಟಗಳನ್ನು ಎದುರಿಸುತ್ತಿರುವ ಕಲಾವಿದರಿಗೆ ಆರ್ಥಿಕ ನೆರವು ನೀಡಲು ಸಂಸ್ಕಾರ ಭಾರತಿ ಹಣ ಸಂಗ್ರಹಿಸುತ್ತಿದೆ. ಇದಕ್ಕಾಗಿ ಭಾರತೀಯ ಜನತಾ ಪಕ್ಷದ ಸಂಸದ ಮತ್ತು ಗಾಯಕ ಹನ್ಸರಾಜ್ ಹನ್ಸ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಒಂದು ಸಮಿತಿ ಕೂಡಾ ರಚಿಸಲಾಗಿದೆ.
ಕಲಾವಿದರಿಗೆ ಹಣಕಾಸಿನ ನೆರವು ನೀಡಲು ಹಣವನ್ನು ಸಂಗ್ರಹಿಸುವ ಪ್ರಯತ್ನದ ಭಾಗವಾಗಿ ಸಂಸ್ಕಾರ ಭಾರತಿ ಇತ್ತೀಚೆಗೆ ಡಿಜಿಟಲ್ ಸಂಗೀತ ಕಾರ್ಯಕ್ರಮ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಪಂಡಿತ್ ಬಿರ್ಜು ಮಹಾರಾಜ್, ಅಮ್ಜದ್ ಅಲಿ ಖಾನ್, ಸೋನಾಲ್ ಮಾನ್ಸಿಂಗ್, ಸೋನು ನಿಗಮ್, ಅಕ್ಷಯ್ ಕುಮಾರ್ ಸೇರಿದಂತೆ ಅನೇಕ ಪ್ರಸಿದ್ಧ ವ್ಯಕ್ತಿಗಳು ಭಾಗವಹಿಸಿದ್ದರು.