ಲಖನೌ(ಉತ್ತರ ಪ್ರದೇಶ): ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ದಿನಾಂಕ ಈಗಾಗಲೇ ಘೋಷಣೆಯಾಗಿದ್ದು, 403 ಕ್ಷೇತ್ರಗಳಿಗೆ ಒಟ್ಟು 7 ಹಂತಗಳಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದ ವೋಟಿಂಗ್ ಫೆ. 10ರಂದು ನಡೆಯಲಿರುವ ಕಾರಣ ಕಾಂಗ್ರೆಸ್ ಈಗಾಗಲೇ ಅಭ್ಯರ್ಥಿಗಳ ಪ್ರಥಮ ಪಟ್ಟಿ ರಿಲೀಸ್ ಮಾಡಿದೆ. ಇದರ ಬೆನ್ನಲ್ಲೇ ಇದೀಗ ಬಿಜೆಪಿ ಕೂಡ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ ಮಾಡಿದೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ಸಂಸದೀಯ ಕ್ಷೇತ್ರವಾಗಿರುವ ಗೋರಖ್ಪುರ್ದಿಂದ ಸ್ಪರ್ಧೆ(ಗೋರಖ್ಪುರ್ ನಗರ) ಮಾಡಲಿದ್ದಾರೆ. ಪಟ್ಟಿ ರಿಲೀಸ್ ಆಗುತ್ತಿದ್ದಂತೆ ಸಮಾಜವಾದಿ ಪಕ್ಷದ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಸಿಎಂ ಕಾಲೆಳೆದಿದ್ದಾರೆ.
ಯೋಗಿ ಕಾಲೆಳೆದ ಅಖಿಲೇಶ್ ಯಾದವ್
ಯೋಗಿ ಆದಿತ್ಯನಾಥ್ ಗೋರಖ್ಪುರ್ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತಗೊಳ್ಳುತ್ತಿದ್ದಂತೆ ಅಖಿಲೇಶ್ ಯಾದವ್ 'ಅಲ್ಲೇ ಇರಿ, ಯಾವುದೇ ಕಾರಣಕ್ಕೂ ವಾಪಸ್ ಬರಬೇಡಿ'("Stay There, Don't Come Back") ಎಂದು ಹೇಳಿದ್ದಾರೆ.
ಯೋಗಿ ಆದಿತ್ಯನಾಥ್ ಅವರನ್ನ ಗೋರಖ್ಪುರ್ಕ್ಕೆ ಕಳುಹಿಸಲು ಬಿಜೆಪಿ ಈಗಾಗಲೇ ನಿರ್ಧರಿಸಿರುವುದು ನನಗೆ ಇಷ್ಟವಾಗಿದೆ. ಯೋಗಿ ಅಲ್ಲಿಯೇ ಉಳಿಯಬೇಕು. ಅಲ್ಲಿಂದ ವಾಪಸ್ ಬರುವ ಅಗತ್ಯವಿಲ್ಲ ಎಂದಿದ್ದಾರೆ. ಯೋಗಿ ಆದಿತ್ಯನಾಥ್ ಅವರನ್ನ ಅಯೋಧ್ಯೆ, ಮಥುರಾ ಅಥವಾ ಪ್ರಯಾಗ್‌ರಾಜ್ ಕ್ಷೇತ್ರದಿಂದ ಕಣಕ್ಕಿಳಿಸದಿರಲು ಬಿಜೆಪಿ ನಿರ್ಧರಿಸಿರುವ ಬೆನ್ನಲ್ಲೇ ಯಾದವ್ ಈ ರೀತಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿರಿ: ರಂಗೇರಿದ ಯುಪಿ ಚುನಾವಣೆ ಕಣ: ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ, ಯೋಗಿ ಕ್ಷೇತ್ರ ಯಾವುದು ಗೊತ್ತಾ?
ಉತ್ತರ ಪ್ರದೇಶ ಬಿಜೆಪಿ ಉಸ್ತುವಾರಿ ಧರ್ಮೇಂದ್ರ ಪ್ರದಾನ್ ಮಾಧ್ಯಮಗೋಷ್ಟಿ ನಡೆಸಿ ಬಿಜೆಪಿ ಅಭ್ಯರ್ಥಿಗಳ ಮೊದಲ ಲಿಸ್ಟ್ ರಿಲೀಸ್ ಮಾಡಿದ್ದು, 57 ಅಭ್ಯರ್ಥಿಗಳಿಗೆ ಟಿಕೆಟ್ ಕನ್ಫರ್ಮ್ ಮಾಡಿದೆ. ಇದರಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗೋರಖ್ಪುರ್ ನಗರದಿಂದ ಸ್ಪರ್ಧಿಸಲಿದ್ದು, ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಸಿರಾಥು ಕ್ಷೇತ್ರದಿಂದ ಅಖಾಡಕ್ಕಿಳಿಯಲಿದ್ದಾರೆ.
ಯೋಗಿ ಆದಿತ್ಯನಾಥ್ ಅವರು ಅಯೋಧ್ಯೆ, ಪ್ರಯಾಗ್‌ರಾಜ್ ಅಥವಾ ಮಥುರಾ ಕ್ಷೇತ್ರದಿಂದ ಉತ್ತರ ಪ್ರದೇಶ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆಂಬ ಮಾತು ಕೇಳಿ ಬಂದಿತ್ತು. ಇದೀಗ ಅದಕ್ಕೆ ತೆರೆ ಬಿದ್ದಿದೆ.
ಯೋಗಿ ಆದಿತ್ಯನಾಥ್ ತಮ್ಮ ರಾಜಕೀಯ ಇತಿಹಾಸದಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿಲ್ಲ. ಆದರೆ, ಗೋರಖ್ಪುರ್ ಲೋಕಸಭೆಯಿಂದ 5 ಸಲ ಸಂಸದರಾಗಿರುವ ಅವರು, ಸದ್ಯ ವಿಧಾನ ಪರಿಷತ್ ಸದಸ್ಯರಾಗಿ, ಮುಖ್ಯಮಂತ್ರಿಯಾಗಿದ್ದಾರೆ. 2017ರ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ದಾಖಲೆಯ 312 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿ, ಸರ್ಕಾರ ರಚನೆ ಮಾಡಿತ್ತು.