ಹೈದರಾಬಾದ್: ಇತ್ತೀಚೆಗೆ ಅಮೆರಿಕದ ಟೆಕ್ಸಾಸ್ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟ ಹೈದರಾಬಾದ್ ಮೂಲದ ಯುವತಿಯ ಅಂತ್ಯಸಂಸ್ಕಾರ ಗುರುವಾರ ನಡೆದಿದೆ. ಹೈದಾರಾಬಾದ್ನ ತಾತಿಕೊಂಡ ಐಶ್ವರ್ಯಾ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದ ಯುವತಿ.
ಅಮೆರಿಕದಿಂದ ಬುಧವಾರ ರಾತ್ರಿ ಒಂಬತ್ತು ಗಂಟೆಗೆ ಐಶ್ವರ್ಯಾ ಅವರ ಪಾರ್ಥಿವ ಶರೀರ ಹೈದರಾಬಾದ್ನ ಸರೂರ್ ನಗರದಲ್ಲಿರುವ ನಿವಾಸಕ್ಕೆ ತಲುಪಿತ್ತು. ಐಶ್ವರ್ಯಾ ಮೃತದೇಹ ಕಂಡ ಪೋಷಕರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನೆ ನಡೆಯವುದಕ್ಕೂ ಮುನ್ನ ಪೋಷಕರೊಂದಿಗೆ ಮಾತನಾಡಿದ್ದ ಐಶ್ವರ್ಯ, ಈ ರೀತಿ ಮನೆಗೆ ವಾಪಸ್ಸಾಗುತ್ತಾಳೆ ಎಂದು ಅಂದುಕೊಂಡಿರಲಿಲ್ಲ ಎಂದು ಪೋಷಕರು ಅಳಲು ತೋಡಿಕೊಂಡರು.
ಗುರುವಾರ ಬೆಳಗ್ಗೆ ತೆಲಂಗಾಣ ಸಚಿವ ಜಗದೀಶ್ವರ್ ರೆಡ್ಡಿ ಹಾಗೂ ಹುಜೂರ್ ನಗರದ ಶಾಸಕ ಸಣಂಪುಡಿ ಸೈದಿರೆಡ್ಡಿ ಆಗಮಿಸಿ ಐಶ್ವರ್ಯ ಪಾರ್ಥಿವ ಶರೀರಕ್ಕೆ ಶ್ರದ್ಧಾಂಜಲಿ ಸಲ್ಲಿಸಿದರು. ಬಳಿಕ ನಾಗೋಲ್ ಫತುಲ್ಲಾ ಗುಡಾ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.
ನಡೆದದ್ದೇನು ? : ಟೆಕ್ಸಾಸ್‌ನ ಡಲ್ಲಾಸ್‌ನಿಂದ ಉತ್ತರಕ್ಕಿರುವ 25 ಕಿಲೋಮೀಟರ್ ದೂರದಲ್ಲಿರುವ ಅಲೆನ್ ಪ್ರೀಮಿಯರ್ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ಐಶ್ವರ್ಯಾ ಶಾಪಿಂಗ್ ಮಾಡುತ್ತಿದ್ದಾಗ ವೇಳೆ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದ. ಘಟನೆಯಲ್ಲಿ ಐಶ್ವರ್ಯಾ ಸೇರಿ 8 ಮಂದಿ ಸಾವನ್ನಪ್ಪಿದ್ದರು. ಇತರ ಏಳು ಮಂದಿ ಗಾಯಗೊಂಡಿದ್ದರು. ಬೆರಳಚ್ಚು ಆಧಾರದ ಮೇಲೆ ಐಶ್ವರ್ಯಾಳನ್ನು ಗುರುತಿಸಲಾಗಿದ್ದು, ಸೋಮವಾರದಂದು ಪೋಷಕರಿಗೆ ಮಾಹಿತಿ ನೀಡಲಾಗಿತ್ತು. ಐಶ್ವರ್ಯಾ ಅವರು ರಂಗಾರೆಡ್ಡಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ನರಸಿರೆಡ್ಡಿ ಅವರ ಪುತ್ರಿ. ಸೂರ್ಯಪೇಟ್ ಜಿಲ್ಲೆಯ ನೆರೆಡುಚರ್ಲಾ ಇವರ ಹುಟ್ಟೂರಾಗಿದ್ದು, ಹೈದರಾಬಾದ್ನ ಸರೂರ್ ನಗರದಲ್ಲಿ ವಾಸವಾಗಿದ್ದರು.
ಹೈದರಾಬಾದ್‌ನಲ್ಲಿ ಎಂಜಿನಿಯರಿಂಗ್ ಓದಿದ ನಂತರ, ಐಶ್ವರ್ಯಾ 2020ರಲ್ಲಿ ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ನಿರ್ಮಾಣ ನಿರ್ವಹಣೆ ಕೋರ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದರು. ನಂತರ, ಸಿವಿಲ್ ಇಂಜಿನಿಯರ್ ಆಗಿ ಪರ್ಫೆಕ್ಟ್ ಜನರಲ್ ಕಾಂಟ್ರಾಕ್ಟರ್ಸ್ ಎಂಬ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಮತ್ತು ಇತ್ತೀಚೆಗೆ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಬಡ್ತಿ ಹೊಂದಿದ್ದರು.
ಕೇರಳದಲ್ಲಿ ವೈದ್ಯೆಯ ಹತ್ಯೆ: ಪ್ರಕರಣದವೊಂದರ ಆರೋಪಿಯಾಗಿದ್ದ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು ವೈದ್ಯಕೀಯ ತಪಾಸಣೆಗೆ ಆಸ್ಪತ್ರೆಗೆ ಕರೆತಂದ ವೇಳೆ ದಾಳಿ ನಡೆಸಿ ಯುವ ವೈದ್ಯೆಯನ್ನು ಸರ್ಜಿಕಲ್ ಬ್ಲೇಡ್ನಿಂದ ಹತ್ಯೆ ಮಾಡಿದ ಆಘಾತಕಾರಿ ಘಟನೆ ಕೇರಳದಲ್ಲಿ ನಡೆದಿದೆ. ಕೊಟ್ಟಾಯಂ ಮೂಲದ ಡಾ.ವಂದನಾ ದಾಸ್ ಮೃತರು. ಸಂದೀಪ್ ಕೊಲೆಗೈದ ಆರೋಪಿ. ಗಾಯಗೊಂಡಿದ್ದ ಆರೋಪಿ ಸಂದೀಪ್ನನ್ನು ಕೊಟ್ಟಾರಕರದ ಆಸ್ಪತ್ರೆಗೆ ಪೊಲೀಸರು ತಪಾಸಣೆಗೆ ಕರೆ ತಂದಿದ್ದರು. 22 ವರ್ಷದ ಮಹಿಳಾ ಸರ್ಜನ್ ವಂದನಾ ಗಾಯಗೊಂಡ ಆರೋಪಿಗೆ ಚಿಕಿತ್ಸೆ ನೀಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಮಹಿಳಾ ವೈದ್ಯೆಯ ಮೇಲೆ ಆತ ಹಲ್ಲೆ ಮಾಡಿದ್ದು, ತೀವ್ರ ರಕ್ತಸ್ರಾವದಿಂದ ವೈದ್ಯೆ ಸಾವನಪ್ಪಿದ್ದಾರೆ. ಘಟನೆ ಖಂಡಿಸಿ ಕೇರಳದ ಹಲವೆಡೆ ಪ್ರತಿಭಟನೆ ನಡೆದಿವೆ.
ಇದನ್ನೂ ಓದಿ: ಅಮೆರಿಕದಲ್ಲಿ ಗುಂಡಿನ ದಾಳಿ: ತೆಲಂಗಾಣ ನ್ಯಾಯಾಧೀಶರ ಮಗಳು ಸಾವು