ನವದೆಹಲಿ : ಕೊರೊನಾ ವೈರಸ್ ರೂಪಾಂತರದ ನಡುವೆಯೇ 256 ಪ್ರಯಾಣಿಕರನ್ನು ಹೊತ್ತ ಯುಕೆ ವಿಮಾನ ಭಾರತಕ್ಕೆ ಬಂದಿಳಿದಿದೆ. ಡಿಸೆಂಬರ್ 23ರಂದು ಭಾರತ ಮತ್ತು ಯುಕೆ ನಡುವಿನ ಸೇವೆಗಳನ್ನು ಸರ್ಕಾರ ಸ್ಥಗಿತಗೊಳಿಸಿದ ನಂತರ ಇದೇ ಮೊದಲ ಭಾರಿಗೆ ವಿಮಾನ ಭಾರತಕ್ಕೆ ಬಂದಿದೆ.
ಏರ್ ಇಂಡಿಯಾ ವಿಮಾನವು ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದಿಂದ ಬೆಳಗ್ಗೆ 10: 20ಕ್ಕೆ ಆಗಮಿಸಿತು. ಇದರಲ್ಲಿ ಬ್ಯುಸಿನೆಸ್ ಕ್ಲಾಸ್ನಲ್ಲಿ 18, ಎಕಾನಮಿಯಲ್ಲಿ 218 ಪ್ರಯಾಣಿಕರು, 9 ಕ್ಯಾಬಿನ್ ಸಿಬ್ಬಂದಿ, ಇಬ್ಬರು ಪೈಲಟ್ ಮತ್ತು 10 ಮಕ್ಕಳಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜನವರಿ 6ರಿಂದ ಸರ್ಕಾರವು ವಿಮಾನ ಯಾನ ನಿಷೇಧ ತೆಗೆದುಹಾಕಿತು. ಇದರ ಬೆನ್ನಲ್ಲೇ ವಾರದಲ್ಲಿ 30 ವಿಮಾನ ಭಾರತ ಹಾಗೂ ಯುಕೆ ನಡುವೆ ಸಂಚಾರ ನಡೆಸಲಿವೆ. ದೆಹಲಿಯ ಐಜಿಐ ವಿಮಾನ ನಿಲ್ದಾಣದ ಸಲಹೆಯ ಪ್ರಕಾರ, ಪ್ರಯಾಣಿಕರು ತಮ್ಮ ತಮ್ಮ ನಗರಗಳಿಗೆ ಸಂಪರ್ಕ ಕಲ್ಪಿಸುವ ವಿಮಾನದ ಸಮಯಕ್ಕೆ ಹೋಲಿಕೆ ಆಗುವ ಹಾಗೆ ಕನಿಷ್ಠ 10 ಗಂಟೆಗಳ ಅಂತರ ಕಾಯ್ದುಕೊಂಡು ಯುಕೆಯಿಂದ ಇಲ್ಲಿಗೆ ಆಗಮಿಸಬೇಕು ಎಂದಿದೆ.
ಈ ಸಂಬಂಧ ಆರೋಗ್ಯ ಸಚಿವಾಲಯ ಹೊರಡಿಸಿದ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್‌ಒಪಿ) ಪ್ರಕಾರ, ಯುಕೆಯಿಂದ ಬರುವ ಪ್ರಯಾಣಿಕರು ಕಳೆದ 14 ದಿನಗಳ ಪ್ರಯಾಣದ ಇತಿಹಾಸ ಘೋಷಿಸಬೇಕು. ಹಾಗೆ 72 ಗಂಟೆಯೊಳಗೆ ನಡೆಸಿದ ಕೋವಿಡ್ ಪರೀಕ್ಷೆಯಲ್ಲಿ ಖುಣಾತ್ಮಕ RT-PCR ವರದಿಯ ಅಗತ್ಯವಿರುತ್ತದೆ.
ಇದೆಲ್ಲದರ ನಡುವೆಯೇ ಯುಕೆಯಿಂದ ಬಂದ 73 ಜನರಲ್ಲಿ ಈವರೆಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಇನ್ನು, ಕೋವಿಡ್ ಹರಡುವುದನ್ನು ತಡೆಯುವ ಸಲುವಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ವಿಮಾನ ನಿಷೇಧವನ್ನು ಜನವರಿ 31ರವರೆಗೆ ವಿಸ್ತರಿಸಬೇಕೆಂದು ಗುರುವಾರ ಕೇಂದ್ರಕ್ಕೆ ಒತ್ತಾಯಿಸಿದ್ದಾರೆ.