ಅಹಮದಾಬಾದ್ (ಗುಜರಾತ್): ಗುಜರಾತ್ನ ಅಹಮದಾಬಾದ್ನಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ಕೌಟುಂಬಿಕ ಕಲಹದ ಕಾರಣದಿಂದಾಗಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ಕತ್ತು ಕೊಯ್ದು ಕೊಲೆ ಮಾಡಿ, ನಂತರ ತಾವಿದ್ದ ಮನೆಗೆ ಬೆಂಕಿ ಹಚ್ಚಿರುವ ಆರೋಪ ಕೇಳಿ ಬಂದಿದೆ. ಇದರಲ್ಲಿ ಸ್ವತಃ ಆರೋಪಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
ಅನಿತಾ ಬಾಘೆಲ್ ಎಂಬುವವರೇ ಪತಿಯಿಂದ ಕೊಲೆಯಾದ ನತದೃಷ್ಟ ಪತ್ನಿ ಎಂದು ಗುರುತಿಸಲಾಗಿದೆ. ಅನಿಲ್ ಬಾಘೆಲ್ ಎಂಬಾತನೇ ಪತ್ನಿಯನ್ನು ಕೊಂದ ಆರೋಪಿಯನ್ನಾಗಿದ್ದಾನೆ. ಇಲ್ಲಿನ ಗೋದ್ರೆಜ್ ಗಾರ್ಡನ್ ಸಿಟಿಯ ಅಪಾರ್ಟ್ಮೆಂಟ್ನಲ್ಲಿ ಈ ಬಾಘೆಲ್ ದಂಪತಿ ವಾಸವಾಗಿದ್ದರು. ಈ ದಂಪತಿಗೆ 8ನೇ ತರಗತಿಯಲ್ಲಿ ಓದುತ್ತಿರುವ ಮಗ ಮತ್ತು 6ನೇ ತರಗತಿಯಲ್ಲಿ ಓದುತ್ತಿರುವ ಓರ್ವ ಮಗಳು ಇದ್ದಾಳೆ ಎಂದು ತಿಳಿದು ಬಂದಿದೆ.
ಇಷ್ಟಕ್ಕೂ ನಡೆದಿದ್ದೇನು?: ಅನಿಲ್ ಬಾಘೆಲ್ ಮತ್ತು ಅನಿತಾ ಬಾಘೆಲ್ ದಂಪತಿ ಈಡನ್ ವಿ ಫ್ಲಾಟ್ನ ನಾಲ್ಕನೇ ಮಹಡಿಯಲ್ಲಿ ಕಳೆದ ಏಳು ವರ್ಷಗಳಿಂದ ತಮ್ಮ ಮಕ್ಕಳೊಂದಿಗೆ ವಾಸವಾಗಿದ್ದರು. ಯಾವುದೋ ಕೌಟುಂಬಿಕ ವಿಚಾರವಾಗಿ ಇಂದು ಬೆಳಗ್ಗೆ ದಂಪತಿ ನಡುವೆ ಜಗಳ ನಡೆದಿದೆ ಎನ್ನಲಾಗಿದೆ. ಈ ಗಲಾಟೆಯ ಸ್ವಲ್ಪ ಸಮಯದ ನಂತರದಲ್ಲಿ ಅಪಾರ್ಟ್ಮೆಂಟ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿ ಸೆಕ್ಯೂರಿಟಿ ಗಾರ್ಡ್, ಗೋದ್ರೆಜ್ ಗಾರ್ಡನ್ ಸಿಟಿಯ ಸೊಸೈಟಿ ಅಧ್ಯಕ್ಷರಿಗೆ ಮಾಹಿತಿ ನೀಡಿದ್ದಾರೆ.
ಅಂತೆಯೇ, ಸೊಸೈಟಿ ಅಧ್ಯಕ್ಷರು ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣವೇ 12 ಅಗ್ನಿಶಾಮಕ ವಾಹನಗಳೊಂದಿಗೆ ಘಟನಾ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಪ್ರವೃತ್ತರಾದ ಒಂದು ಗಂಟೆ ಕಾಲ ಹರಸಾಹಸ ಮಟ್ಟು ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಈ ವೇಳೆ, ಪತಿ ಅನಿಲ್ ಬಘೇಲ್ ಮತ್ತು ಪತ್ನಿ ಅನಿತಾ ಬಾಧೇಲ್ ಇಬ್ಬರೂ ನೆಲ ಮಹಡಿಯಲ್ಲಿ ಗಾಯಗೊಂಡು ಬಿದ್ದಿರುವುದು ಕೂಡ ಬೆಳಕಿಗೆ ಬಂದಿದೆ.
ಮಕ್ಕಳನ್ನು ಶಾಲೆಗೆ ಕಳುಹಿಸಿದ ನಂತರ ದಂಪತಿಯ ಜಗಳ: ಅನಿಲ್ ಬಾಘೆಲ್ ಕೆಮಿಕಲ್ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಬೆಳಗ್ಗೆ ಅನಿಲ್ ಮತ್ತು ಅನಿತಾ ದಂಪತಿ ಎಂದಿನಂತೆ ತಮ್ಮ ಇಬ್ಬರೂ ಮಕ್ಕಳನ್ನೂ ಶಾಲೆಗೆ ಬಿಟ್ಟು ಬಂದಿದ್ದರು. ಇದಾದ ನಂತರವೇ ಗಂಡ ಮತ್ತು ಹೆಂಡ್ತಿ ಮಧ್ಯೆ ಜಗಳ ಶುರುವಾಗಿತ್ತು ಎಂದು ಶಂಕಿಸಲಾಗಿದೆ. ಸದ್ಯ ಅನಿತಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪೊಲೀಸರು ರವಾನಿಸಿದ್ದಾರೆ. ಇತ್ತ, ಅನಿಲ್ನನ್ನು ಸೋಲಾ ಸಿವಿಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಹೇಗೆ?: ಅನಿಲ್ ಹಾಗೂ ಅನಿತಾ ದಂಪತಿ ನಾಲ್ಕನೇ ಮಹಡಿಯಲ್ಲಿ ವಾಸವಾಗಿದ್ದರು. ಇದೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆದರೆ, ಈ ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ನೆಲ ಮಹಡಿಯಲ್ಲಿ ದಂಪತಿ ಒಬ್ಬರಿಗೊಬ್ಬರು ಇರಿತಕ್ಕೆ ಒಳಗಾಗಿ ಗಾಯಗೊಂಡು ಸ್ಥಿತಿಯಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ಆದ್ದರಿಂದ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಹೇಗೆ ಎಂಬ ಬಗ್ಗೆ ಇನ್ನೂ ನಿಖರ ಮಾಹಿತಿ ಗೊತ್ತಾಗಿಲ್ಲ. ಈ ಕುರಿತಾಗಿ ಪೊಲೀಸರು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.
ಇದನ್ನೂ ಓದಿ: ಮಕ್ಕಳಾಗಲಿಲ್ಲ ಎಂದು ಚಿತಾಭಸ್ಮ ತಿನ್ನಿಸಿದ ದುರುಳರು: ಕುಟುಂಬಸ್ಥರಿಂದಲೇ ಮಹಿಳೆಗೆ ವಾಮಾಚಾರ!